ನವದೆಹಲಿ: ಇಂದು 2023ನೇ ವರ್ಷದ ಕೊನೆಯ ದಿನ. ಒಂದೆಡೆ ಈ ವರ್ಷ ಮುಗಿಯುತ್ತಿದ್ದರೆ ಇನ್ನೊಂದೆಡೆ ಇನ್ನೇನು ಕೆಲವೇ ಗಂಟೆಗಳಲ್ಲಿ ಹೊಸ ವರುಷದ ಉದಯವಾಗಲಿದೆ. ವರ್ಷದ ಕಟ್ಟಕಡೆಯ ದಿನವಾದ ಇಂದು (ಡಿಸೆಂಬರ್ 31) ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಪ್ರಜೆಗಳೊಂದಿಗೆ ನೇರವಾಗಿ ಸಂಪರ್ಕ ಸಾಧಿಸುವ 'ಮನ್ ಕಿ ಬಾತ್' ರೇಡಿಯೋ ಕಾರ್ಯಕ್ರಮ ಪ್ರಸಾರವಾಗಲಿದೆ. ಇದು ಮನ್ ಕಿ ಬಾತ್‌ನ 108ನೇ ಸಂಚಿಕೆಯಾಗಿದೆ.
2023ರ ಕೊನೆಯ ಕಾರ್ಯಕ್ರಮ ಇದಾಗಿದ್ದು, ಪ್ರತಿ ಬಾರಿಯಂತೆ ಬೆಳಿಗ್ಗೆ 11ಕ್ಕೆ ಪ್ರಸಾರವಾಗಲಿದೆ. ದೂರದರ್ಶನ, ಆಲ್ ಇಂಡಿಯಾ ರೇಡಿಯೋ ಮತ್ತು ಭಾರತೀಯ ಜನತಾ ಪಕ್ಷದ ಫೇಸ್‌ಬುಕ್, ಎಕ್ಸ್ ಮತ್ತು ಯೂಟ್ಯೂಬ್‌ನಲ್ಲಿ ಈ ಕಾರ್ಯಕ್ರಮವನ್ನು ಕೇಳಬಹುದು.
ಪ್ರಧಾನಿ ಇಂದಿನ ಹೊಸ ಸಂಚಿಕೆಯ ಮೂಲಕ ದೇಶವಾಸಿಗಳಿಗೆ ಹೊಸ ವರ್ಷದ ಶುಭಾಶಯ ಕೋರಲಿದ್ದಾರೆ. ಇದಲ್ಲದೆ, ಅಯೋಧ್ಯೆಯಲ್ಲಿ ನಿರ್ಮಿಸಲಾಗುತ್ತಿರುವ ಭವ್ಯ ರಾಮಮಂದಿರ ಮತ್ತು ಅದರ ಪ್ರತಿಷ್ಠಾಪನೆಯ ಬಗ್ಗೆಯೂ ಪ್ರಸ್ತಾಪಿಸಬಹುದು. ಏಪ್ರಿಲ್ 30, 2023ರಂದು 'ಮನ್ ಕಿ ಬಾತ್' ಕಾರ್ಯಕ್ರಮದ 100 ಸಂಚಿಕೆಗಳು ಪೂರ್ಣಗೊಂಡಿವೆ. ಈ ಐತಿಹಾಸಿಕ ಕ್ಷಣವನ್ನು ದೇಶಾದ್ಯಂತ ನೇರಪ್ರಸಾರ ಮಾಡಲಾಗಿತ್ತು.