ನವದೆಹಲಿ:ಮಹಾಮಾರಿ ಕೊರೊನಾ ವೈರಸ್ ಹಾವಳಿಗೆ ಪ್ರತಿದಿನ ಸಾವಿರಾರು ಜನರು ತಮ್ಮ ಪ್ರಾಣ ಕಳೆದುಕೊಳ್ಳುತ್ತಿದ್ದು, ಅನೇಕ ಕುಟುಂಬಗಳು ತಮ್ಮ ಪ್ರೀತಿ - ಪಾತ್ರರನ್ನ ದೂರ ಮಾಡಿಕೊಳ್ಳುತ್ತಿದ್ದಾರೆ. ಇದೇ ವಿಷಯಕ್ಕೆ ಸಂಬಂಧಿಸಿದಂತೆ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಇಂದು ಭಾವುಕರಾದರು.
ಭಾವುಕರಾದ ಪ್ರಧಾನಿ ನರೇಂದ್ರ ಮೋದಿ ಕೋವಿಡ್ಗೆ ಪ್ರಾಣ ಕಳೆದುಕೊಂಡವರ ಬಗ್ಗೆ ಮಾತನಾಡುತ್ತಿದ್ದ ವೇಳೆ ಭಾವುಕರಾದ ಪ್ರಧಾನಿ ನರೇಂದ್ರ ಮೋದಿ, ಈ ವೈರಸ್ ನಮ್ಮಿಂದ ಅನೇಕ ಪ್ರೀತಿ - ಪಾತ್ರರನ್ನ ಕಸಿದುಕೊಂಡಿದೆ. ಅವರಿಗೆ ನನ್ನ ವಿನಮ್ರ ಗೌರವ ಸಲ್ಲಿಸುತ್ತೇನೆ. ಅವರಿಗೆ ಕಳೆದುಕೊಂಡಿರುವ ಕುಟುಂಬಗಳಿಗೆ ನನ್ನ ಸಂತಾಪ ವ್ಯಕ್ತಪಡಿಸುತ್ತೇನೆ ಎಂದರು.
ಉತ್ತರ ಪ್ರದೇಶದ ತಮ್ಮ ಸಂಸದೀಯ ಕ್ಷೇತ್ರವಾದ ವಾರಾಣಸಿಯಲ್ಲಿ ಆರೋಗ್ಯ ಕಾರ್ಯಕರ್ತರೊಂದಿಗೆ ವಿಡಿಯೋ ಸಂವಾದದಲ್ಲಿ ಭಾಗಿಯಾಗಿ ಮಾತನಾಡಿದ ನಮೋ, ಅವರ ಕೆಲಸಕ್ಕೆ ಧನ್ಯವಾದ ಅರ್ಪಿಸಿದರು. ಕೊರೊನಾ ಎರಡನೇ ಹಂತದ ಅಲೆ ಅನೇಕರ ಪ್ರಾಣ ಬಲಿ ಪಡೆದುಕೊಂಡಿದ್ದು, ಅನೇಕ ರೋಗಿಗಳು ಹೆಚ್ಚಿನ ಸಮಯ ಆಸ್ಪತ್ರೆಯಲ್ಲಿ ಕಳೆಯಬೇಕಾದ ಅನಿವಾರ್ಯತೆ ನಿರ್ಮಾಣಗೊಂಡಿದೆ ಎಂದರು.
ನಮೋ ವಿಡಿಯೋ ಸಂವಾದಲ್ಲಿ ವಾರಾಣಸಿಯಲ್ಲಿ ಕೆಲಸ ಮಾಡುತ್ತಿರುವ ವೈದ್ಯರು, ದಾದಿಯರು ಮತ್ತು ಅರೆವೈದ್ಯಕೀಯ ಸಿಬ್ಬಂದಿ ಭಾಗಿಯಾಗಿದ್ದರು. ಕೋವಿಡ್ ಎರಡನೇ ಅಲೆ ಬ್ರೇಕ್ ಮಾಡಲು ವ್ಯಾಪಾರಿಗಳು ಸ್ವಯಂ ಪ್ರೇರಿತರಾಗಿ ಅಂಗಡಿ-ಮುಗಟ್ಟು ಮುಚ್ಚಿರುವುದು ನಿಜಕ್ಕೂ ಶ್ಲಾಘನೀಯ ಎಂದ ನಮೋ, ಇಲ್ಲಿ ಜಾರಿಗೆ ತರಲಾಗಿರುವ ಮೈಕ್ರೋ ಕಂಟೇನ್ಮೆಂಟ್ ಝೋನ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ವಾರಾಣಸಿ ಕ್ಷೇತ್ರದ ಸಂಸದರಾಗಿರುವ ನರೇಂದ್ರ ಮೋದಿ, ಅಲ್ಲಿನ ದಾದಿಯರು, ವೈದ್ಯರು, ಆ್ಯಂಬುಲೆನ್ಸ್ ಚಾಲಕರು ಹಾಗೂ ಆಸ್ಪತ್ರೆ ಸಿಬ್ಬಂದಿಗಳ ಕೆಲಸಕ್ಕೆ ಮೆಚ್ಚುಗೆ ಸಹ ವ್ಯಕ್ತಪಡಿಸಿದರು.