ಕರ್ನಾಟಕ

karnataka

ETV Bharat / bharat

Independence day: ಯುವಶಕ್ತಿಯಿಂದ ಭಾರತ ವಿಶ್ವಗುರು: ಪ್ರಧಾನಿ ನರೇಂದ್ರ ಮೋದಿ - ಕೆಂಪುಕೋಟೆಯ ಮೇಲೆ ತ್ರಿವರ್ಣ ಧ್ವಜ

ಸತತ 10ನೇ ಬಾರಿಗೆ ಕೆಂಪುಕೋಟೆಯ ಮೇಲೆ ತ್ರಿವರ್ಣ ಧ್ವಜ ಹಾರಿಸಿದ ಪ್ರಧಾನಿ ನರೇಂದ್ರ ಮೋದಿ ಅವರು, ದೇಶದ ಅಭಿವೃದ್ಧಿಗೆ ಸರ್ಕಾರದ ನೀತಿಗಳ ಬಗ್ಗೆ ಮಾತನಾಡಿದರು.

Etv Bharat
Etv Bharat

By

Published : Aug 15, 2023, 8:47 AM IST

ನವದೆಹಲಿ:ಭಾರತ ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾಗಿದೆ. ಜನಸಂಖ್ಯೆಯಲ್ಲಿ ದೇಶ ಮುಂಚೂಣಿಯಲ್ಲಿದೆ. 140 ಕೋಟಿ ಜನರು ಸ್ವಾತಂತ್ರ್ಯ ಸಂಭ್ರಮದಲ್ಲಿದ್ದಾರೆ. ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಕೊಡುಗೆ ನೀಡಿದ ಎಲ್ಲ ವೀರರಿಗೆ ನಮನ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದರು.

ದೆಹಲಿಯ ಕೆಂಪುಕೋಟೆಯಲ್ಲಿ 77ನೇ ಸ್ವಾತಂತ್ರ್ಯೋತ್ಸವದ ಧ್ವಜಾರೋಹಣ ಮಾಡಿದ ಬಳಿಕ ಮಾತನಾಡಿದ ಪ್ರಧಾನಿ, ಹಿಮಾಚಲಪ್ರದೇಶ, ಉತ್ತರಾಖಂಡದಲ್ಲಿ ನೈಸರ್ಗಿಕ ವಿಕೋಪ ಉಂಟಾಗಿದೆ. ದೇಶದ ಹಲವು ಭಾಗದಲ್ಲಿ ಸಂಕಷ್ಟಕ್ಕೆ ಸಿಲುಕಿವೆ. ಹಾನಿಗೀಡಾದ ಕುಟುಂಬಗಳಿಗೆ ಸರ್ಕಾರ ಬೆಂಬಲವಾಗಿ ನಿಲ್ಲಲಿದೆ ಎಂದು ಹೇಳಿದರು.

ಯುವಶಕ್ತಿಯಿಂದ ಭಾರತ ವಿಶ್ವಗುರು:ಭಾರತ ವಿಶ್ವಗುರುವಾಗುವ ಕಾಲ ಬಂದಿದೆ. ಅಂಥದ್ದೊಂದು ಅವಕಾಶವನ್ನು ಬಳಸಿಕೊಳ್ಳಬೇಕಿದೆ. ದೇಶದ ಯುವಕರು ಇದನ್ನು ಸಾಕಾರ ಮಾಡುವರು ಎಂಬ ನಿರೀಕ್ಷೆ ಇದೆ. ಯುವ ಶಕ್ತಿಯಿಂದಲೇ ದೇಶದ ಪ್ರಗತಿ ಸಾಧ್ಯ ಎಂದು ಪ್ರಧಾನಿ ಮೋದಿ ಅವರು ಯುವಶಕ್ತಿಯನ್ನು ಹಾಡಿ ಹೊಗಳಿದರು.

ಕೊರೊನಾ ಕಾಲದಲ್ಲಿ ದೇಶ ನಡೆದುಕೊಂಡ ಬಗ್ಗೆ ವಿಶ್ವವೇ ಬೆರಗಾಗಿದೆ. ಜನರು ಮಾನವೀಯ ಸಂವೇದನೆಯಿಂದ ನಡೆದುಕೊಳ್ಳಬೇಕು ಎಂಬುದನ್ನು ಕೊರೊನಾ ಕಲಿಸಿಕೊಟ್ಟಿದೆ. ಕೊರೊನಾ ಬಳಿಕ ವಿಶ್ವ ಭಾರತವನ್ನು ಗೌರವಿಸುವ ರೀತಿ ಬದಲಾಗಿದೆ ಎಂದು ಹೇಳಿದರು.

ಕೃಷಿ ಕ್ಷೇತ್ರದಲ್ಲಿ ರೈತರು ಪ್ರಗತಿ ಸಾಧಿಸುತ್ತಿದ್ದಾರೆ. ರೈತರು ವಿಶ್ವಕ್ಕೆ ಆಹಾರ ಧಾನ್ಯಗಳನ್ನು ರಫ್ತು ಮಾಡುವ ಮಟ್ಟಕ್ಕೆ ಬೆಳೆದಿದ್ದಾರೆ. ಭಾರತೀಯ ಶ್ರಮಜೀವಿಗಳು ಬೆವರು ಸುರಿಸಿ ರಾಷ್ಟ್ರದ ಸಂಪತ್ತನ್ನು ಹೆಚ್ಚಿಸುತ್ತಿದ್ದಾರೆ. ಸಣ್ಣ ಕೈಗಾರಿಕೆಗಳು ಮತ್ತು ಸಣ್ಣ ಉದ್ಯಮಗಳು ಹೊಸ ಶಕೆಯನ್ನು ಕಾಣುತ್ತಿವೆ. ಭಾರತೀಯರು ಭವಿಷ್ಯದಲ್ಲಿ ಆತ್ಮವಿಶ್ವಾಸ ಹೆಚ್ಚಿಸಿಕೊಂಡಿದ್ದಾರೆ. ಭಾರತದ ಮೇಲೆ ವಿಶ್ವದ ವಿಶ್ವಾಸವೂ ಹೆಚ್ಚಿದೆ. ಜಗತ್ತು ನಮ್ಮತ್ತ ನೋಡುತ್ತಿರುವುದು ಇಡೀ ರಾಷ್ಟ್ರದ ಶ್ರಮದ ಫಲ ಎಂದು ಪ್ರಧಾನಿ ಹೇಳಿದರು.

ಮಧ್ಯಮ ವರ್ಗಕ್ಕಾಗಿ ಶೀಘ್ರವೇ ವಿಶೇಷ ಯೋಜನೆ:ಮಧ್ಯಮ ವರ್ಗದ ಜನರ ಸ್ವಂತ ಮನೆ ಕನಸನ್ನು ನನಸು ಮಾಡಲು ಹೊಸ ಯೋಜನೆ ತರಲಿದ್ದೇವೆ. ಬ್ಯಾಂಕ್ ಸಾಲಗಳ ಮೇಲೆ ರಿಯಾಯಿತಿ ನೀಡಲು ಹೊಸ ಯೋಜನೆಯನ್ನು ಪ್ರಾರಂಭಿಸುತ್ತಿದ್ದೇವೆ. ಈ ಯೋಜನೆಯು ನಗರ ಪ್ರದೇಶಗಳಲ್ಲಿ ವಾಸಿಸುವ ಕೆಳ ಮತ್ತು ಮಧ್ಯಮ ವರ್ಗದ ಜನರಿಗೆ ಸ್ವಂತ ಮನೆ ಕನಸನ್ನು ನನಸಾಗಿಸುವ ಗುರಿ ಹೊಂದಿದೆ. ಲಕ್ಷಾಂತರ ರೂಪಾಯಿಗಳ ಲಾಭವನ್ನು ಒದಗಿಸುವ ಈ ಯೋಜನೆಯನ್ನು ಶೀಘ್ರದಲ್ಲೇ ಘೋಷಿಸಲಾಗುವುದು ಎಂದು ನುಡಿದರು.

ಬೆಲೆ ಏರಿಕೆಯಿಂದ ಜನರು ಎದುರಿಸುತ್ತಿರುವ ಸಂಕಷ್ಟವನ್ನು ಕಡಿಮೆ ಮಾಡಲು ಪ್ರಯತ್ನಿಸಲಾಗುತ್ತಿದೆ. ಜಲ ಆಧಾರಿತ ಸಾರಿಗೆ ವ್ಯವಸ್ಥೆಯಿಂದ ಕ್ವಾಂಟಮ್ ಕಂಪ್ಯೂಟರ್‌ಗಳು ಮತ್ತು ಮೆಟ್ರೋ ರೈಲು ವ್ಯವಸ್ಥೆಗಳವರೆಗೆ ನಾವು ತ್ವರಿತ ಪ್ರಗತಿಯನ್ನು ಸಾಧಿಸುತ್ತಿದ್ದೇವೆ. ಭಾರತವು ಹಳೆಯ ಆಲೋಚನೆಗಳು ಮತ್ತು ನೀತಿಗಳನ್ನು ಬಿಟ್ಟು ಹೊಸ ಗುರಿಗಳತ್ತ ವೇಗವಾಗಿ ಚಲಿಸುತ್ತಿದೆ. ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಹೊಸ ರಸ್ತೆಗಳನ್ನು ನಿರ್ಮಿಸುತ್ತಿದ್ದೇವೆ. ದೇಶಾದ್ಯಂತ ಸ್ವಾತಂತ್ರ್ಯ ಅಮೃತ ಮಹೋತ್ಸವದ ಭಾಗವಾಗಿ 75 ಸಾವಿರ ಜಲ ಸಂಪನ್ಮೂಲಗಳನ್ನು ಅಭಿವೃದ್ಧಿಪಡಿಸುತ್ತಿದ್ದೇವೆ ಎಂದರು.

ಪರಿಸರ ರಕ್ಷಣೆಗೆ ಜಲಶಕ್ತಿ, ಜನಶಕ್ತಿ:ಜಲಶಕ್ತಿ ಮತ್ತು ಜನಶಕ್ತಿಯನ್ನು ಒಗ್ಗೂಡಿಸಿ ಪರಿಸರ ಸಂರಕ್ಷಣೆಗೆ ಹೆಜ್ಜೆ ಇಡುತ್ತಿದ್ದೇವೆ. ದೇಶಕ್ಕೆ ಹೊಸ ಇಂಧನ ಮೂಲಗಳನ್ನು ತರುತ್ತಿದ್ದೇವೆ. ಸೌರಶಕ್ತಿ ಮತ್ತು ಪವನಶಕ್ತಿಯನ್ನು ಬಳಸಿಕೊಂಡು ಅಗ್ಗದ ದರದಲ್ಲಿ ವಿದ್ಯುತ್ ಉತ್ಪಾದಿಸುತ್ತಿದ್ದೇವೆ. ಎಥೆನಾಲ್ ಉತ್ಪಾದನೆಯಲ್ಲಿ ಒಂದು ಹೆಜ್ಜೆ ಮುಂದಿಡುತ್ತಿದ್ದೇವೆ ಮತ್ತು ಪೆಟ್ರೋಲ್​ ಆಮದಿನ ಹೊರೆಯನ್ನು ಮತ್ತಷ್ಟು ಕಡಿಮೆ ಮಾಡುತ್ತಿದ್ದೇವೆ. ಭಾರತ ಯಾವುದೇ ಶಕ್ತಿಗೆ ಹೆದರುವುದಿಲ್ಲ, ತಲೆಬಾಗುವುದಿಲ್ಲ. ಭಾರತವು ಸ್ವಾವಲಂಬಿಯಾಗುತ್ತಿದೆ ಎಂದು ಪ್ರಧಾನಿ ಹೇಳಿದರು.

ಇದನ್ನೂ ಓದಿ:Independence Day: ಇತಿಹಾಸ ಸಾರುವ ಬೆಳಗಾವಿ ವೀರಸೌಧ; ಹಿರಿಯ ಸ್ವಾತಂತ್ರ್ಯ ಹೋರಾಟಗಾರ ರಾಜೇಂದ್ರ ಕಲಘಟಗಿ ಹೇಳಿದ್ದೇನು?

ABOUT THE AUTHOR

...view details