ನವದೆಹಲಿ: ಕೇಂದ್ರದ ರೈತ ಪರ ನೀತಿಗಳಿಂದಾಗಿ ದೇಶದ ಆಹಾರ ಸಂಸ್ಕರಣಾ ಉದ್ಯಮವು ಕಳೆದ 9 ವರ್ಷಗಳಲ್ಲಿ 50,000 ಕೋಟಿ ರೂ.ಗಳ ವಿದೇಶಿ ನೇರ ಹೂಡಿಕೆಯನ್ನು (ಎಫ್ಡಿಐ) ಆಕರ್ಷಿಸಿದೆ ಮತ್ತು ಇದು ಸಂಭಾವ್ಯ ಉದಯೋನ್ಮುಖ ಉದ್ಯಮವಾಗಿ ಹೊರಹೊಮ್ಮಿದೆ ಎಂದು ಪ್ರಧಾನಿ ಮೋದಿ ಹೇಳಿದರು. ಇಂದು ರಾಷ್ಟ್ರ ರಾಜಧಾನಿಯ ಪ್ರಗತಿ ಮೈದಾನದಲ್ಲಿ 'ವರ್ಲ್ಡ್ ಫುಡ್ ಇಂಡಿಯಾ 2023' ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು. ಕಳೆದ ಒಂಬತ್ತು ವರ್ಷಗಳಲ್ಲಿ ಭಾರತದ ಸಂಸ್ಕರಿಸಿದ ಆಹಾರದ ರಫ್ತು ಶೇಕಡಾ 150 ರಷ್ಟು ಹೆಚ್ಚಾಗಿದೆ ಮತ್ತು ದೇಶದ ದೇಶೀಯ ಆಹಾರ ಸಂಸ್ಕರಣಾ ಸಾಮರ್ಥ್ಯ ಗಣನೀಯವಾಗಿ ಹೆಚ್ಚಾಗಿದೆ ಎಂದು ಅವರು ಪ್ರತಿಪಾದಿಸಿದರು.
ಮೆಗಾ ಫುಡ್ ಈವೆಂಟ್ ನ ಎರಡನೇ ಆವೃತ್ತಿಯು ಸ್ವಸಹಾಯ ಗುಂಪುಗಳನ್ನು (ಎಸ್ ಎಚ್ ಜಿ) ಬಲಪಡಿಸುವ ಪ್ರಯತ್ನಗಳ ಭಾಗವಾಗಿದೆ. ಈ ಸಂದರ್ಭದಲ್ಲಿ ಪ್ರಧಾನಿ ಮೋದಿ ಒಂದು ಲಕ್ಷಕ್ಕೂ ಹೆಚ್ಚು SHG ಸದಸ್ಯರಿಗೆ ಆರಂಭಿಕ ಬಂಡವಾಳ ಸಹಾಯಧನವನ್ನು ವಿತರಿಸಿದರು ಮತ್ತು 'ವರ್ಲ್ಡ್ ಫುಡ್ ಇಂಡಿಯಾ 2023' ರ ಭಾಗವಾಗಿ 'ಫುಡ್ ಸ್ಟ್ರೀಟ್' ಅನ್ನು ಉದ್ಘಾಟಿಸಿದರು. ದೆಹಲಿಯಲ್ಲಿ ನಡೆದಿರುವ ಮೂರು ದಿನಗಳ ಮೆಗಾ ಫುಡ್ ಈವೆಂಟ್ ನವೆಂಬರ್ 5 ರಂದು ಕೊನೆಗೊಳ್ಳಲಿದೆ.
ಸಮಾವೇಶದಲ್ಲಿ ಮಾತನಾಡಿದ ಕೇಂದ್ರ ಆಹಾರ ಸಂಸ್ಕರಣಾ ಕೈಗಾರಿಕಾ ಸಚಿವ ಪಶುಪತಿ ಕುಮಾರ್ ಪರಾಸ್, ವಿದೇಶಿ ಹೂಡಿಕೆದಾರರು ಭಾರತಕ್ಕೆ ಬಂದು ಆಹಾರ ಸಂಸ್ಕರಣಾ ಕ್ಷೇತ್ರದಲ್ಲಿ ಹೂಡಿಕೆ ಮಾಡುವಂತೆ ಮನವಿ ಮಾಡಿದರು.