ಬಲರಾಂಪುರ(ಉತ್ತರ ಪ್ರದೇಶ): ಕಳೆದ ನಾಲ್ಕು ದಶಕಗಳಿಂದ ಬಾಕಿ ಉಳಿದಿದ್ದ ಸರಯೂ ನಹರ್ ರಾಷ್ಟ್ರೀಯ ಯೋಜನೆ ಕೊನೆಗೂ ಲೋಕಾರ್ಪಣೆಗೊಂಡಿದೆ. ಪ್ರಧಾನಿ ನರೇಂದ್ರ ಮೋದಿ ಉತ್ತರ ಪ್ರದೇಶದ ಬಲರಾಂಪುರ ಜಿಲ್ಲೆಯಲ್ಲಿ ನಿರ್ಮಾಣಗೊಂಡಿರುವ ರಾಷ್ಟ್ರೀಯ ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ಇಂದು ಚಾಲನೆ ನೀಡಿದರು.
ಸರಯೂ ನಹರ್ ರಾಷ್ಟ್ರೀಯ ಯೋಜನೆಗೆ ಒಟ್ಟು 9,800 ಕೋಟಿ ರೂ ವೆಚ್ಚ ಮಾಡಲಾಗಿದ್ದು, 9 ಜಿಲ್ಲೆಯ 14 ಲಕ್ಷ ಹೆಕ್ಟರ್ ಭೂಮಿಗೆ ನೀರಾವರಿ ಸೌಲಭ್ಯ ಒದಗಿಸುತ್ತದೆ. ಮುಂದಿನ ವರ್ಷ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆ ನಡೆಯಲಿದ್ದು, ಹೀಗಾಗಿ ಮೇಲಿಂದ ಮೇಲೆ ಯೋಗಿ ನಾಡಿಗೆ ಪ್ರಯಾಣ ಬೆಳೆಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ಇಂದು ಕೂಡ ಅಲ್ಲಿಗೆ ತೆರಳಿ ಬೃಹತ್ ಯೋಜನೆ ಲೋಕಾರ್ಪಣೆಗೊಳಿಸಿದ್ದಾರೆ. ಇದರ ಬೆನ್ನಲ್ಲೇ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿರುವ ನಮೋ, ಉತ್ತರ ಪ್ರದೇಶ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ವಿರುದ್ಧ ಟೀಕಾ ಪ್ರಹಾರ ನಡೆಸಿದರು.
ಉತ್ತರ ಪ್ರದೇಶದಲ್ಲಿ ಈ ಹಿಂದೆ ಆಡಳಿತ ನಡೆಸಿರುವ ಅನೇಕ ಪಕ್ಷಗಳು ತಮ್ಮ ಹಿತಾಸಕ್ತಿಗೆ ಕೆಲಸ ಮಾಡಿದ್ದು, ಇಂತಹ ಪ್ರಮುಖ ಯೋಜನೆ ಸ್ಥಗಿತಗೊಳಿಸಿದ್ದವು ಎಂದರು. ಉತ್ತರ ಪ್ರದೇಶದಲ್ಲಿ ಕೇವಲ ರಿಬ್ಬನ್ ಕತ್ತರಿಸುವುದು, ನಂತರ ಯೋಜನೆ ಮರೆತು ಬಿಡುವುದು ಸಾಮಾನ್ಯವಾಗಿದೆ. ಇದೇ ಕಾರಣಕ್ಕಾಗಿ ಈ ಯೋಜನೆ ಬಾಕಿ ಉಳಿದಿತ್ತು.
ಆದರೆ, ಇದೀಗ ಯೋಗಿ ಸರ್ಕಾರ ಇಂತಹ ಮಹತ್ವದ ಯೋಜನೆಗೆ ಅಂತಿಮ ರೂಪ ನೀಡಿದ್ದು, ರೈತರಿಗೆ ಸಹಕಾರಿಯಾಗಲಿದೆ ಎಂದರು. ಸರ್ಕಾರದ ಹಣ ಮತ್ತು ಸಂಪನ್ಮೂಲ ದುರ್ಬಳಕೆ ಮಾಡಿಕೊಳ್ಳುವ ಮನಸ್ಥಿತಿ ಹೊಂದಿರುವ ರಾಜಕೀಯ ಪಕ್ಷಗಳಿಂದ ದೇಶದ ಪ್ರಗತಿಗೆ ದೊಡ್ಡ ಅಡ್ಡಿ ಎಂದು ಇದೇ ವೇಳೆ ಹೇಳಿದರು.