ನವದೆಹಲಿ: ತಾಯಿ ಹೀರಾಬೆನ್ ಅಂತ್ಯಸಂಸ್ಕಾರ ನೆರವೇರಿಸಿ ನಂತರ ಪ್ರಧಾನಿ ನರೇಂದ್ರ ಮೋದಿ ಕರ್ತವ್ಯಕ್ಕೆ ಮರಳಿದ್ದಾರೆ. ವರ್ಚುಯಲ್ ಮೂಲಕ ಹೌರಾ ಮತ್ತು ನ್ಯೂ ಜಲಪಾಯ್‌ಗುರಿ ನಡುವಿನ ‘ವಂದೇ ಭಾರತ್ ಎಕ್ಸ್‌ಪ್ರೆಸ್’ ರೈಲಿಗೆ ಚಾಲನೆ ನೀಡಿದರು. ಅಲ್ಲದೇ ಸುಮಾರು 7,800 ಕೋಟಿ ಮೊತ್ತದ ಹಲವು ಅಭಿವೃದ್ಧಿ ಕಾಮಗಾರಿಗಳಿಗೆ ಅವರು ವಿಡಿಯೋ ಕಾನ್ಫರೆನ್ಸ್ ಮೂಲಕ ಚಾಲನೆ ನೀಡಿದರು.
ತಾಯಿ ಹೀರಾಬೆನ್ ಮೃತ ಪಟ್ಟ ಹಿನ್ನೆಲೆ ಶುಕ್ರವಾರ ಬೆಳಗ್ಗೆ ಅಹಮದಾಬಾದ್‌ಗೆ ಪ್ರಧಾನಿ ಮೋದಿ ತೆರಳಿದ್ದರು. ಈ ವೇಳೆ, ಯಾವುದೇ ಕಾರ್ಯಕ್ರಮಗಳನ್ನು ರದ್ದುಗೊಳಿಸುವುದಿಲ್ಲ ಎಂದು ಅವರ ಕಚೇರಿ ತಿಳಿಸಿತ್ತು. ಅದರಂತೆ ಪಶ್ಚಿಮ ಬಂಗಾಳದಲ್ಲಿ ಇಂದು ಹಮ್ಮಿಕೊಂಡಿದ್ದ ಎಲ್ಲಾ ಕಾರ್ಯಕ್ರಮಕ್ಕೂ ನರೇಂದ್ರ ಮೋದಿ ವರ್ಚುಯಲ್ ಮೂಲಕ ಭಾಗವಹಿಸಿದರು.
ಮೋದಿ ಕಾರ್ಯಶೈಲಿಗೆ ಶರಣೆಂದ ಮಮತಾ:ರೈಲಿಗೆ ಪ್ರಧಾನಿ ಚಾಲನೆ ನೀಡಿದ ನಂತರ ಮಮತಾ ಬ್ಯಾನರ್ಜಿ ಮಾತನಾಡಿ, ಹೀರಾಬೆನ್ ಮೋದಿ ಅವರ ನಿಧನಕ್ಕೆ ಸಂತಾಪ ಸೂಚಿಸಿದರು. ತಾಯಿಗೆ ಪರ್ಯಾಯವಿಲ್ಲ. ನಿಮ್ಮ ತಾಯಿ ನನ್ನ ತಾಯಿಯ ರೀತಿ. ನೀವು ನಿಮ್ಮ ಕಾಳಜಿ ವಹಿಸಿ ಎಂದು ಮೋದಿಗೆ ವಿನಂತಿಸಿದರು. ಇಂತಹ ದಿನದಲ್ಲಿಯೂ ನೀವು ನಿಮ್ಮ ಕರ್ತವ್ಯವನ್ನು ನಿರ್ವಹಿಸಿದ ರೀತಿ ನಿಜವಾಗಿಯೂ ಪ್ರಶಂಸನೀಯವಾಗಿದೆ ಎಂದು ಹೇಳಿದರು.
ಹೌರಾ - ನ್ಯೂ ಜಲಪಾಯ್‌ಗುರಿ ವಂದೇ ಭಾರತ್ ಎಕ್ಸ್‌ಪ್ರೆಸ್ ಮತ್ತು ಕೋಲ್ಕತ್ತಾ ಮೆಟ್ರೋದ ನೇರಳೆ ಮಾರ್ಗಕ್ಕೆ ಚಾಲನೆ ನೀಡಿದ ಪ್ರಧಾನಿ ಮೋದಿ, ಸ್ವಾತಂತ್ರ್ಯ ಚಳವಳಿಗೆ ಬಂಗಾಳದ ಕೊಡುಗೆಯನ್ನು ನೆನಪಿಸಿಕೊಂಡರು. ಡಿಸೆಂಬರ್ 30 ಇತಿಹಾಸದಲ್ಲಿ ಮಹತ್ವದ ದಿನವಾಗಿದೆ. ಡಿಸೆಂಬರ್ 30, 1943 ರಂದು ನೇತಾಜಿ ಸುಭಾಷ್ ಚಂದ್ರ ಬೋಸ್ ಅಂಡಮಾನ್‌ನಲ್ಲಿ ಸ್ವಾತಂತ್ರ್ಯಕ್ಕಾಗಿ ಸ್ಪಷ್ಟವಾದ ಕರೆ ನೀಡಿದ್ದರು ಎಂಬುದನ್ನು ನೆನಪು ಮಾಡಿಕೊಂಡರು.
ಇದನ್ನೂ ಓದಿ:ಪ್ರಧಾನಿ ಮೋದಿ ತಾಯಿ ಅಗಲಿಕೆಗೆ ರಾಜ್ಯ ನಾಯಕರ ಕಂಬನಿ