ಸೂರತ್ (ಗುಜರಾತ್):ಅಂತಾರಾಷ್ಟ್ರೀಯ ವಜ್ರ ಮತ್ತು ಆಭರಣ ವ್ಯಾಪಾರಕ್ಕಾಗಿ ವಿಶ್ವದ ಅತಿದೊಡ್ಡ ಅತ್ಯಾಧುನಿಕ ಕೇಂದ್ರವಾಗಿರುವ ಸೂರತ್ ಡೈಮಂಡ್ ಬೋರ್ಸ್ (Surat Diamond Bourse -SDB) ಕಟ್ಟಡವನ್ನು ಪ್ರಧಾನಿ ನರೇಂದ್ರ ಮೋದಿ ಭಾನುವಾರ ಉದ್ಘಾಟಿಸಿದರು. ಈ ಡೈಮಂಡ್ ಬೋರ್ಸ್ ಕಟ್ಟಡವು 67 ಲಕ್ಷ ಚದರ್ ಅಡಿಗಿಂತ ಹೆಚ್ಚು ವಿಸ್ತೀರ್ಣದಲ್ಲಿ ತಲೆ ಎತ್ತಿದ್ದು, ವಿಶ್ವದ ಅತಿದೊಡ್ಡ ಕಚೇರಿ ಸಂಕೀರ್ಣ ಎಂಬ ಹೆಗ್ಗಳಿಕೆ ಪಡೆದಿದೆ.
ಸೂರತ್ ಡೈಮಂಡ್ ಬೋರ್ಸ್ ಉದ್ಘಾಟನೆಗೂ ಮುನ್ನ 353 ಕೋಟಿ ವೆಚ್ಚದಲ್ಲಿ ನಿರ್ಮಿಸಲಾದ ಸೂರತ್ ವಿಮಾನ ನಿಲ್ದಾಣದ ನೂತನ ಟರ್ಮಿನಲ್ ಕಟ್ಟಡವನ್ನೂ ಪಿಎಂ ಮೋದಿ ಉದ್ಘಾಟಿಸಿದರು. ಬಳಿಕ ಸಮಾರಂಭ ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಇಂದು ಸೂರತ್‌ನ ಜನರು ಮತ್ತು ಇಲ್ಲಿನ ವ್ಯಾಪಾರಿಗಳು ಮತ್ತು ಉದ್ಯಮಿಗಳಿಗೆ ಇನ್ನೂ ಎರಡು ಉಡುಗೊರೆಗಳು ದೊರೆತಿವೆ. ಸೂರತ್ ವಿಮಾನ ನಿಲ್ದಾಣದ ಹೊಸ ಟರ್ಮಿನಲ್ ಉದ್ಘಾಟನೆಯಾಗಿದೆ ಮತ್ತು ಎರಡನೇ ದೊಡ್ಡ ವಿಷಯವೆಂದರೆ ಈಗ ಸೂರತ್ ವಿಮಾನ ನಿಲ್ದಾಣವು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸ್ಥಾನಮಾನವನ್ನು ಪಡೆದುಕೊಂಡಿದೆ. ಈ ಅದ್ಭುತ ಟರ್ಮಿನಲ್ ಮತ್ತು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕಾಗಿ ನಾನು ಸೂರತ್‌ನ ಜನರು ಮತ್ತು ಗುಜರಾತ್‌ನ ಜನರನ್ನು ಅಭಿನಂದಿಸುತ್ತೇನೆ ಎಂದು ತಿಳಿಸಿದರು.
ಅಲ್ಲದೇ, ಸೂರತ್ ಡೈಮಂಡ್ ಬೋರ್ಸ್ ಭಾರತೀಯ ವಿನ್ಯಾಸಕರು, ಭಾರತೀಯ ವಸ್ತುಗಳು ಮತ್ತು ಭಾರತೀಯ ಪರಿಕಲ್ಪನೆಗಳ ಸಾಮರ್ಥ್ಯಗಳನ್ನು ಪ್ರದರ್ಶಿಸುತ್ತದೆ. ಈ ಕಟ್ಟಡವು ನವ ಭಾರತದ ಹೊಸ ಶಕ್ತಿ ಮತ್ತು ಹೊಸ ಸಂಕಲ್ಪದ ಸಂಕೇತವಾಗಿದೆ. ಸೂರತ್ ಡೈಮಂಡ್ ಬೋರ್ಸ್ ಮೋದಿ ಗ್ಯಾರಂಟಿಗೆ ಉದಾಹರಣೆ ಎಂದು ಪ್ರಧಾನಿ ಹೇಳಿದರು. ಮುಂದುವರೆದು, ನನ್ನ ಮೂರನೇ ಅವಧಿಯಲ್ಲಿ ಭಾರತವು ವಿಶ್ವದ ಅಗ್ರ ಮೂರು ಆರ್ಥಿಕತೆ ರಾಷ್ಟ್ರಗಳಲ್ಲಿ ಒಂದಾಗಲಿದೆ ಎಂಬ ಭರವಸೆಯನ್ನು ನಾನು ರಾಷ್ಟ್ರಕ್ಕೆ ನೀಡಿದ್ದೇನೆ. ಮುಂಬರುವ 25 ವರ್ಷಗಳ ಗುರಿಯನ್ನೂ ಸರ್ಕಾರ ಈಗಲೇ ನಿಗದಿಪಡಿಸಿದೆ ಎಂದರು.