ನವದೆಹಲಿ:ಸೆಂಟ್ರಲ್ ವಿಸ್ತಾ ಯೋಜನೆಯ ಭಾಗವಾಗಿ ನಿರ್ಮಿಸಲಾಗಿರುವ ನೂತನ ಸಂಸತ್ ಭವನವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ಬೆಳಗ್ಗೆ ಮಂತ್ರಘೋಷಗಳ ಪಠಣದ ನಡುವೆ ಉದ್ಘಾಟಿಸಿದರು. ಸ್ಪೀಕರ್ ಪೀಠದ ಬಳಿಕ ಚಿನ್ನದ ರಾಜದಂಡವನ್ನು ಪ್ರತಿಷ್ಠಾಪಿಸಿ ಗತವೈಭವವನ್ನು ಮೆರೆದರು.
ಇಂದು ಬೆಳಗ್ಗೆ 7.15 ಕ್ಕೆ ಸಾಂಪ್ರದಾಯಿಕ ಬಿಳಿ ಉಡುಗೆಯಲ್ಲಿ ಪ್ರಧಾನಿ ಮೋದಿ ಅವರು ಗೇಟ್ ನಂ.1 ರಿಂದ ಸಂಸತ್ ಆವರಣಕ್ಕೆ ಆಗಮಿಸಿದರು. ಅವರನ್ನು ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಸ್ವಾಗತಿಸಿದರು. ಮಹಾತ್ಮ ಗಾಂಧಿ ಪ್ರತಿಮೆ ಪಕ್ಕದಲ್ಲಿ ಆಯೋಜಿಸಿದ್ದ ಪೂಜಾ ವಿಧಾನಗಳಲ್ಲಿ ಇಬ್ಬರೂ ಭಾಗಿಯಾದರು. ಕರ್ನಾಟಕದ ಶೃಂಗೇರಿ ಮಠದ ಪುರೋಹಿತರು ವೇದ ಘೋಷಗಳನ್ನು ಪಠಿಸಿದರು. ಹೊಸ ಸಂಸತ್ ಭವನದ ಉದ್ಘಾಟನಾ ಸಮಾರಂಭ ಸಾಂಘವಾಗಿ ನಡೆಯಲು "ಗಣಪತಿ ಹೋಮ" ನಡೆಸಲಾಯಿತು.
ರಾಜದಂಡ ಸೆಂಗೋಲ್ ಹಸ್ತಾಂತರ:ಪೂಜಾ ವಿಧಾನಗಳು ಮುಗಿದ ಬಳಿಕ ಬಹುಚರ್ಚಿತ ರಾಜದಂಡವಾದ 'ಸೆಂಗೋಲ್' ಅನ್ನು ತಮಿಳುನಾಡಿನ ವಿವಿಧ ಅಧೀನಂಗಳಿಂದ ಪ್ರಧಾನಿ ಮೋದಿ ಅವರಿಗೆ ಹಸ್ತಾಂತರ ಮಾಡಲಾಯಿತು. ಪೂಜ್ಯರ ಆಶೀರ್ವಾದ ಪಡೆದ ಪ್ರಧಾನಿಗಳು, ಅದರ ಮುಂದೆ ಸಾಷ್ಟಾಂಗ ನಮಸ್ಕಾರ ಮಾಡಿದರು. ಬಳಿಕ ಪವಿತ್ರ ರಾಜದಂಡದೊಂದಿಗೆ ಮೋದಿ ಅವರು ನಾದಸ್ವರ ಮತ್ತು ವೇದ ಮಂತ್ರಗಳ ಪಠಣಗಳ ನಡುವೆ ಮೆರವಣಿಗೆಯಲ್ಲಿ ಹೊಸ ಸಂಸತ್ ಭವನಕ್ಕೆ ಸೆಂಗೋಲ್ ಅನ್ನು ಕೊಂಡೊಯ್ದರು.
ಲೋಕಸಭೆಯ ಸಭಾಂಗಣದಲ್ಲಿ ಸ್ಪೀಕರ್ ಕುರ್ಚಿಯ ಬಲಭಾಗದಲ್ಲಿ ನಿಗದಿಪಡಿಸಲಾಗಿದ್ದ ವಿಶೇಷ ಆವರಣದಲ್ಲಿ ರಾಜದಂಡವನ್ನು ಸ್ಪೀಕರ್ ಓಂ ಬಿರ್ಲಾ ಅವರ ಸಮೇತ ತೆರಳಿ ಅಲ್ಲಿ ಪ್ರತಿಷ್ಠಾಪಿಸಿದರು. ಅಲ್ಲಿ ಇಡಲಾಗಿದ್ದ ಜ್ಯೋತಿಯನ್ನ ಬೆಳಗಿಸುವ ಮೂಲಕ ನೂತನ ಸಂಸತ್ ಭವನದ ಉದ್ಘಾಟನೆಗೆ ಅಧಿಕೃತ ಚಾಲನೆ ನೀಡಿದರು.