ಸಬರಕಾಂತ (ಗುಜರಾತ್): ಗುಜರಾತ್‌ನ ಸಬರಕಾಂತದಲ್ಲಿರುವ ಗಧೋಡಾ ಚೌಕಿಯಲ್ಲಿ ಒಂದು ಸಾವಿರ ಕೋಟಿ ರೂಪಾಯಿಗೂ ಅಧಿಕ ವೆಚ್ಚದ ಸಬರ್ ಡೈರಿಯ ಬಹು ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆಯನ್ನು ಪ್ರಧಾನಿ ನರೇಂದ್ರ ಮೋದಿ ಗುರುವಾರ ನೆರವೇರಿಸಿದರು.
ಸಬರ್ ಡೈರಿಯಲ್ಲಿ ದಿನಕ್ಕೆ 120 ಮೆಟ್ರಿಕ್ ಟನ್ ಪೌಡರ್ ಉತ್ಪಾದನಾ ಘಟಕವನ್ನು ಉದ್ಘಾಟಿಸಿದ ಅವರು, ಇದು ಸ್ಥಳೀಯ ರೈತರು ಮತ್ತು ಹಾಲು ಉತ್ಪಾದಕರ ಸಬಲೀಕರಣ ಹಾಗೂ ಆದಾಯ ಹೆಚ್ಚಿಸುವಲ್ಲಿ ಸಹಕಾರಿಯಾಗಲಿದೆ. ಅಲ್ಲದೇ, ಸಬರಕಾಂತ ಪ್ರದೇಶದ ಗ್ರಾಮೀಣ ಆರ್ಥಿಕತೆಗೆ ಉತ್ತೇಜನವನ್ನು ನೀಡುತ್ತದೆ ಎಂದು ಹೇಳಿದರು.
ಜೊತೆಗೆ ಇದೇ ಸಬರ್ ಡೈರಿಯಲ್ಲಿ ಅಸೆಪ್ಟಿಕ್ ಮಿಲ್ಕ್ ಪ್ಯಾಕೇಜಿಂಗ್ ಘಟಕವನ್ನು ಪ್ರಧಾನಿ ಉದ್ಘಾಟಿಸಿದರು. ಇದು ಅತ್ಯಾಧುನಿಕ ಸ್ಥಾವರವಾಗಿದ್ದು, ದಿನಕ್ಕೆ 3 ಲಕ್ಷ ಲೀಟರ್ ಹಾಲು ಸಂಗ್ರಹಿಸುವ ಸಾಮರ್ಥ್ಯ ಹೊಂದಿದೆ. ಇದೇ ವೇಳೆ, ಅಂದಾಜು ವೆಚ್ಚ ಸುಮಾರು 600 ಕೋಟಿ ರೂ. ವೆಚ್ಚದ ಸಬಾರ್ ಚೀಸ್ ಮತ್ತು ವೇ ಡ್ರೈಯಿಂಗ್ ಪ್ಲಾಂಟ್ ಯೋಜನೆಗೂ ಮೋದಿ ಅಡಿಗಲ್ಲು ಹಾಕಿದರು.