ಪಣಜಿ (ಗೋವಾ):ಗೋವಾದ ಮೊಪಾದಲ್ಲಿ ಮನೋಹರ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಭಾನುವಾರ ಸಂಜೆ ಪ್ರಧಾನಿ ನರೇಂದ್ರ ಉದ್ಘಾಟಿಸಿದರು. ಗ್ರೀನ್‌ಫೀಲ್ಡ್ ವಿಮಾನ ನಿಲ್ದಾಣ ಇದಾಗಿದ್ದು, ಮೊದಲ ಹಂತಕ್ಕೆ ಪ್ರಧಾನಿ ಚಾಲನೆ ನೀಡಿದರು.
ನಂತರ ಮಾತನಾಡಿದ ಪ್ರಧಾನಿ ಮೋದಿ, ಮೊಪಾ ವಿಮಾನ ನಿಲ್ದಾಣಕ್ಕೆ ನನ್ನ ಆತ್ಮೀಯ ಸ್ನೇಹಿತ ಮತ್ತು ಸಹೋದ್ಯೋಗಿ ಮತ್ತು ಗೋವಾದ ಪ್ರೀತಿಯ ಮನೋಹರ್ ಪರಿಕ್ಕರ್ ಅವರ ಹೆಸರನ್ನು ಇಡುತ್ತಿರುವುದು ನನಗೆ ಸಂತೋಷ ತಂದಿದೆ. ವಿಮಾನ ನಿಲ್ದಾಣದ ಮೂಲಕ ಮನೋಹರ್ ಪರಿಕ್ಕರ್ ನೆನಪು ಜೀವಂತವಾಗಿರುತ್ತದೆ ಎಂದು ಹೇಳಿದರು.
ಇದೇ ವೇಳೆ 2014ರ ಮೊದಲು ವಿಮಾನ ಪ್ರಯಾಣವು ಐಷಾರಾಮಿಯಾಗಿತ್ತು. ಈಗ ಮಧ್ಯಮ ವರ್ಗದ ಕುಟುಂಬಗಳು ಸಹ ಕೈಗೆಟುಕುವ ದರದಲ್ಲಿ ವಿಮಾನಯಾನ ಆಯ್ಕೆಯಾಗಿ ನೋಡುತ್ತಿದ್ದಾರೆ. ಹಿಂದಿನ ಸರ್ಕಾರಗಳು ಸಾರ್ವಜನಿಕ ಸೌಲಭ್ಯಗಳ ವಿಷಯದಲ್ಲಿ ಜನರಿಗೆ ಬೇಕಾದುದನ್ನು ಮಾಡುವ ಬದಲು ದಶಕಗಳಿಂದ ವೋಟ್ ಬ್ಯಾಂಕ್ ವಿಧಾನವನ್ನು ಅಳವಡಿಸಿಕೊಂಡಿದ್ದವು ಎಂದು ಪ್ರಧಾನಿ ಮೋದಿ ವಾಗ್ದಾಳಿ ನಡೆಸಿದರು.