ನವದೆಹಲಿ:ಕೇಂದ್ರಾಡಳಿತ ಪ್ರದೇಶದಲ್ಲಿ ಹೊಸ ಕ್ರೀಡಾ ಪರಿಸರ ವ್ಯವಸ್ಥೆಯನ್ನು ಸ್ಥಾಪಿಸಲು, ಜಮ್ಮು- ಕಾಶ್ಮೀರವನ್ನು ಕ್ರೀಡಾ ಕೇಂದ್ರವನ್ನಾಗಿ ಮಾಡಲು ಖೇಲೋ ಇಂಡಿಯಾ ಗೇಮ್ಸ್ ಸಹಾಯ ಮಾಡುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ಇಂದು ಜಮ್ಮು ಮತ್ತು ಕಾಶ್ಮೀರದ ಗುಲ್ಮಾರ್ಗ್ನಲ್ಲಿ ಎರಡನೇ ಆವೃತ್ತಿಯ ಖೇಲೋ ಇಂಡಿಯಾ ವಿಂಟರ್ ಗೇಮ್ಸ್ ಅನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ಪಿಎಂ ಮೋದಿ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಕ್ರೀಡೆ ಕೇವಲ ಹವ್ಯಾಸ ಅಥವಾ 'ಟೈಮ್ ಪಾಸ್' ಅಲ್ಲ. ಕ್ರೀಡೆಗಳಲ್ಲಿ ನಾವು ತಂಡದ ಉತ್ಸಾಹವನ್ನು ಕಾಣುತ್ತೇವೆ, ಸೋಲಿನಿಂದ ಹೊಸತನ್ನು ಕಲಿಯುತ್ತೇವೆ. ಮತ್ತೆ ಮತ್ತೆ ವಿಜಯಶಾಲಿಗಳಾಗಲು ಪ್ರಯತ್ನಿಸುತ್ತೇವೆ. ಕ್ರೀಡೆ ಆಟಗಾರರ ಜೀವನ ಮತ್ತು ಜೀವನಶೈಲಿಯನ್ನು ರೂಪಿಸುತ್ತದೆ, ಆತ್ಮವಿಶ್ವಾಸ ಹೆಚ್ಚಿಸುತ್ತದೆ ಎಂದರು.