ನವದೆಹಲಿ:ರಾಷ್ಟ್ರ ರಾಜಧಾನಿಯಲ್ಲಿ ನಡೆಯುತ್ತಿರುವ ಸಿರಿಧಾನ್ಯಗಳ ಕುರಿತ ಎರಡು ದಿನಗಳ ಜಾಗತಿಕ ಸಮ್ಮೇಳನವನ್ನು ಇಂದು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದರು. ಇದೇ ಸಂದರ್ಭದಲ್ಲಿ ಈ ವರ್ಷ ಅಂದರೆ 2023ರಲ್ಲಿ ಆಚರಿಸಲಾಗುವ 'ಅಂತಾರಾಷ್ಟ್ರೀಯ ಸಿರಿಧಾನ್ಯಗಳ ವರ್ಷ'ವನ್ನು ಗುರುತಿಸಲೆಂದು ತಯಾರಿಸಲಾದ ಅಂಚೆ ಚೀಟಿ ಹಾಗೂ ಸಿರಿಧಾನ್ಯಗಳ ವರ್ಷದ ಅಧಿಕೃತ ನಾಣ್ಯವನ್ನು ಅನಾವರಣಗೊಳಿದರು.
ಹೈದರಾಬಾದ್ ಮೂಲದ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮಿಲ್ಲೆಟ್ಸ್ ರಿಸರ್ಚ್ (IIMR) ಅನ್ನು ಜಾಗತಿಕ ಶ್ರೇಷ್ಠತೆಯ ಕೇಂದ್ರ ಎಂದು ಘೋಷಿಸುವುದರ ಜೊತೆಗೆ ಕೇಂದ್ರ ಸರ್ಕಾರ 'ಶ್ರೀ ಅನ್ನ' ಎಂದು ಹೆಸರಿಸಿದ ಸಿರಿಧಾನ್ಯಗಳ ಕುರಿತ ವಿಡಿಯೋವನ್ನು ಸಹ ಇದೇ ಸಂದರ್ಭದಲ್ಲಿ ಬಿಡುಗಡೆ ಮಾಡಲಾಯಿತು.
ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ಪ್ರಧಾನಿ ಮೋದಿ, ಇಂದು ಇಡೀ ವಿಶ್ವವೇ 'ಅಂತಾರಾಷ್ಟ್ರೀಯ ಸಿರಿಧಾನ್ಯಗಳ ವರ್ಷ'ವನ್ನು ಆಚರಿಸುತ್ತಿರುವಾಗ ಈ ಅಭಿಯಾನವನ್ನು ಭಾರತ ಮುನ್ನಡೆಸುತ್ತಿರುವುದು ನನಗೆ ಬಹಳ ಹೆಮ್ಮೆ ಅನಿಸಿದೆ. ಜಾಗತಿಕ ಸಿರಿಧಾನ್ಯಗಳ ಸಮ್ಮೇಳನವು ಈ ದಿಸೆಯಲ್ಲಿ ಮಹತ್ವದ ಹೆಜ್ಜೆಯಾಗಿದೆ. ಜಾಗತಿಕ ಸಿರಿಧಾನ್ಯ ಸಮ್ಮೇಳನದಂತಹ ಕಾರ್ಯಕ್ರಮಗಳು ಜಾಗತಿಕ ಒಳಿತಿಗಾಗಿ ಮಾತ್ರವಲ್ಲದೇ, ಜಾಗತಿಕ ಒಳಿತಿಗಾಗಿ ಭಾರತದ ಜವಾಬ್ದಾರಿ ಹೆಚ್ಚುತ್ತಿರುವುದರ ಸಂಕೇತವೂ ಹೌದು. ನಾವು ಅಭಿಯಾನವನ್ನು ಮುಂದಕ್ಕೆ ಕೊಂಡೊಯ್ಯುತ್ತಿರುವಾಗ ಅದನ್ನು ಪೂರ್ಣಗೊಳಿಸುವ ಜವಾಬ್ದಾರಿಯೂ ಅಷ್ಟೇ ಮುಖ್ಯ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ಭಾರತದ ಸಲ್ಲಿಸಿದ ಪ್ರಸ್ತಾವನೆ ಹಾಗೂ ಪ್ರಯತ್ನಗಳ ಫಲವಾಗಿ ವಿಶ್ವಸಂಸ್ಥೆ 2023 ಅನ್ನು 'ಅಂತಾರಾಷ್ಟ್ರೀಯ ಸಿರಿಧಾನ್ಯಗಳ ವರ್ಷ' ಎಂದು ಘೋಷಿಸಿರುವುದು ನಮಗೆ ಅತ್ಯಂತ ಗೌರವದ ವಿಷಯ. ಈ ಸಮ್ಮೇಳನದಲ್ಲಿ ಇಂದು ಭಾರತದ ಸುಮಾರು 75 ಲಕ್ಷಕ್ಕೂ ಹೆಚ್ಚು ರೈತರು ನಮ್ಮೊಂದಿಗೆ ಇಲ್ಲಿದ್ದಾರೆ. ಇದು ಸಮ್ಮೇಳನ ಮಾತ್ರವಲ್ಲ ಸಿರಿಧಾನ್ಯಗಳಿಗಿರುವ ಮಹತ್ವವನ್ನು ತೋರಿಸುತ್ತದೆ ಎಂದು ಹೇಳಿದರು.
ಸಣ್ಣ ರೈತರಿಗೆ ಆಗುವ ಪ್ರಯೋಜನಗಳ ಕುರಿತು ವಿವರಿಸಿದ ಅವರು, 'ಭಾರತದಲ್ಲಿ ಈಗ ಸಿರಿಧಾನ್ಯಗಳಿಗೆ 'ಶ್ರೀ ಅನ್ನ' ಎಂಬ ಗುರುತನ್ನು ನೀಡಲಾಗಿದೆ. ಶ್ರೀ ಅನ್ನವು ಭಾರತದಲ್ಲಿ ಅಭಿವೃದ್ಧಿಯ ಮಾಧ್ಯಮವಾಗುತ್ತಿದೆ. ಶ್ರೀ ಅನ್ನವನ್ನು ಜಾಗತಿಕ ಆಂದೋಲನವನ್ನಾಗಿಸಲು ನಾವು ನಿರಂತರವಾಗಿ ಶ್ರಮಿಸಿದ್ದೇವೆ. ಇಲ್ಲಿ 12-13 ರಾಜ್ಯಗಳಲ್ಲಿ ಸಿರಿಧಾನ್ಯಗಳನ್ನು ಬೆಳೆಯಲಾಗುತ್ತದೆ, ಆದರೆ, ಅದರ ದೇಶೀಯ ಬಳಕೆ ತಿಂಗಳಿಗೆ ಒಬ್ಬ ವ್ಯಕ್ತಿಗೆ 2-3 ಕೆಜಿಗಿಂತ ಹೆಚ್ಚಿರಲಿಲ್ಲ. ಆದರೆ, ಇಂದು ಅದು ತಿಂಗಳಿಗೆ 14 ಕೆಜಿಗೆ ಏರಿಕೆಯಾಗಿದೆ. 2.5 ಕೋಟಿ ಸಣ್ಣ ರೈತರು ಸಿರಿಧಾನ್ಯಗಳ ಜೊತೆ ನೇರ ಸಂಬಂಧ ಹೊಂದಿದ್ದಾರೆ. ಶ್ರೀ ಅನ್ನ ಎನ್ನುವ ಯೋಜನೆಯ ನಮ್ಮ ಧ್ಯೇಯ ಈ ಸಣ್ಣ ರೈತರಿಗೆ ವರದಾನವಾಗಲಿದೆ. ಶ್ರೀ ಅನ್ನ ಮಾರುಕಟ್ಟೆಯು ಅವರಿಗೆ ಮತ್ತು ಸಂಬಂಧಿತ ಪರಿಸರ ವ್ಯವಸ್ಥೆಗೂ ಪ್ರಯೋಜನವಾಗಲಿದೆ. ಗ್ರಾಮೀಣ ಆರ್ಥಿಕತೆ ಇದು ಬಲಪಡಿಸುತ್ತದೆ.'
ಸಿರಿಧಾನ್ಯವನ್ನು ದೇಶದ 19 ಜಿಲ್ಲೆಗಳಲ್ಲಿ 'ಒಂದು ಜಿಲ್ಲೆ ಒಂದು ಉತ್ಪನ್ನ' ಯೋಜನೆಯಡಿಯೂ ಸೇರಿಸಲಾಗಿದೆ. ಪ್ರಸ್ತುತ ಭಾರತ ಜಿ 20ಯ ಅಧ್ಯಕ್ಷತೆಯನ್ನೂ ವಹಿಸಿಕೊಂಡಿದ್ದು, ಅದರ ಧ್ಯೇಯವಾಕ್ಯ 'ಒಂದು ಭೂಮಿ, ಒಂದು ಕುಟುಂಬ, ಒಂದು ಭವಿಷ್ಯ' ಅಂತಾರಾಷ್ಟ್ರೀಯ ಸಿರಿಧಾನ್ಯಗಳ ವರ್ಷದ ಮೇಲೂ ಪ್ರಭಾವ ಬೀರುತ್ತದೆ. ಸಿರಿಧಾನ್ಯಗಳು ಹೊಸ ಉದ್ಯೋಗಗಳನ್ನೂ ಸಹ ಸೃಷ್ಟಿಸುತ್ತಿವೆ ಎಂದು ಉದ್ಘಾಟನಾ ಸಮಾರಂಭದಲ್ಲಿ ಸಭೆಯನ್ನುದ್ದೇಶಿಸಿ ಹೇಳಿದರು.
ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಮಾತನಾಡಿ, 'ಪ್ರಧಾನಿ ನರೇಂದ್ರ ಮೋದಿಯವರ ಪ್ರೇರಣೆಯಿಂದ ವಿಶ್ವಸಂಸ್ಥೆಯು 2023 ನ್ನು ಅಂತಾರಾಷ್ಟ್ರೀಯ ಸಿರಿಧಾನ್ಯಗಳ ವರ್ಷ ಎಂದು ಘೋಷಿಸಿದ ಪರಿಣಾಮವಾಗಿ 'ಶ್ರೀ ಅನ್ನ'ಕ್ಕೆ ದೇಶೀಯ ಮತ್ತು ಜಾಗತಿಕವಾಗಿ ಬೇಡಿಕೆ ಹೆಚ್ಚಿದೆ' ಎಂದರು.
ಜಾಗತಿಕ ಸಮ್ಮೇಳನದಲ್ಲಿ 100 ಕ್ಕೂ ಹೆಚ್ಚು ದೇಶಗಳಿಂದ ಪ್ರತಿನಿಧಿಗಳು ಭಾಗವಹಿಸುವ ನಿರೀಕ್ಷೆಯಿದೆ ಮತ್ತು ಪ್ರಪಂಚದಾದ್ಯಂತದ ಹಲವಾರು ಮಧ್ಯಸ್ಥಗಾರರು ಸಮ್ಮೇಳನಕ್ಕೆ ಹಾಜರಾಗುತ್ತಾರೆ. 2021ರ ಮಾರ್ಚ್ 5ರಂದು ಭಾರತದ ಪ್ರಸ್ತಾವವನ್ನು ಒಪ್ಪಿಕೊಂಡು, ಯುನೈಟೆಡ್ ನೇಷನ್ಸ್ ಜನರಲ್ ಅಸೆಂಬ್ಲಿ (UNGA)ಯಲ್ಲಿ 2023 ಅನ್ನು ಅಂತಾರಾಷ್ಟ್ರೀಯ ಸಿರಿಧಾನ್ಯಗಳ ವರ್ಷ (IYM) ಎಂದು ಘೋಷಿಸಲಾಯಿತು.
ಇದನ್ನೂ ಓದಿ:ಸರ್ಕಾರಿ ಸಭೆ, ಸಮಾರಂಭಗಳಲ್ಲಿ ಸಿರಿಧಾನ್ಯದ ತಿಂಡಿ ತಿನಿಸು, ಪಾನೀಯ ಬಳಸಲು ಸುತ್ತೋಲೆ