ಅಯೋಧ್ಯೆ (ಉತ್ತರ ಪ್ರದೇಶ):ಅಯೋಧ್ಯೆಯಲ್ಲಿ 14 ಲಕ್ಷ ದೀಪೋತ್ಸವಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಚಾಲನೆ ನೀಡಿದರು. ಅಯೋಧ್ಯೆಯ ಹೊಸ ಘಾಟ್, ಸರಯೂ ನದಿಯಲ್ಲಿ ಪ್ರಧಾನಿ ಮೋದಿ ದೀಪ ಹಚ್ಚುವ ಮೂಲಕ ದೀಪೋತ್ಸವವನ್ನು ಉದ್ಘಾಟನೆ ಮಾಡಿದರು. ಅಯೋಧ್ಯೆಯ ಸರಯೂ ನದಿಯ ದಡದದುದ್ದಕ್ಕೂ ಮಣ್ಣಿನ ದೀಪಗಳು ಜಗಮಗಿಸಿದವು. ದೀಪಾವಳಿಯ ಮುನ್ನಾದಿನವೇ ಅಯೋಧ್ಯೆಯ ರಾಮಜನ್ಮಭೂಮಿ ದಿವ್ಯ ಬೆಳಕಿನಲ್ಲಿ ಹೊಳೆಯಿತು.
ರಾಮನಿಗೆ ರಾಜ್ಯಾಭಿಷೇಕ:ಬಳಿಕ ಪ್ರಧಾನಿ ಮೋದಿ ಅವರು, ಅಯೋಧ್ಯೆಯಲ್ಲಿ ಸಾಂಕೇತಿಕವಾಗಿ ಶ್ರೀರಾಮನಿಗೆ ರಾಜ್ಯಾಭಿಷೇಕ ನೆರವೇರಿಸಿದರು. ರಾಮ, ಸೀತೆ, ಲಕ್ಷ್ಮಣ, ಹನುಮನ ಅವತಾರಿಗಳಿಗೆ ಹಣೆಗೆ ತಿಲಕ ಇಡುವ ಮೂಲಕ ಪಟ್ಟಾಭಿಷೇಕ ಮಾಡಿದರು.
ಬಳಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಶ್ರೀರಾಮ ಸಬ್ಕಾ ಸಾಥ್, ಸಬ್ಕಾ ವಿಕಾಸ್ ಹಿಂದಿನ ಸ್ಫೂರ್ತಿ. ಇಂದು ರಾಮನ ಪಟ್ಟಾಭಿಷೇಕ ಮಾಡಲಾಗಿದೆ. ಇದೊಂದು ಸುದೈವದ ಸಂಗತಿಯಾಗಿದೆ. ಈ ಸೌಭಾಗ್ಯ ಭಗವಂತ ಶ್ರೀರಾಮನ ಕೃಪೆಯಿಂದ ಮಾತ್ರ ದೊರೆಯುತ್ತದೆ ಎಂದು ಹೇಳಿದರು.
ಶ್ರೀರಾಮ ಬೋಧಿಸಿದ 'ಕರ್ತವ್ಯ ಬಲ'ದ ಮಾದರಿಯಲ್ಲಿ 'ಕರ್ತವ್ಯಪಥ'ದಲ್ಲಿ ಸಾಗಿ ದೇಶ ಇಂದು ಜಾಗತಿಕವಾಗಿ ಬೆಳೆದು ನಿಂತಿದೆ. ರಾಮನನ್ನು ಮರ್ಯಾದಾ ಪುರುಷೋತ್ತಮ ಎಂದು ಕರೆಯುತ್ತಾರೆ. ಇದು ನಮಗೆ ಗೌರವ ನೀಡುವುದನ್ನು ಕಲಿಸುತ್ತದೆ. ಮರ್ಯಾದೆಯ ಸಾಕ್ಷಾತ್ಕಾರವೇ ಕರ್ತವ್ಯವಾಗಿದೆ ಎಂದು ವ್ಯಾಖ್ಯಾನಿಸಿದರು.
ಸರಯೂ ನದಿ ತೀರದಲ್ಲಿ ನಾಲ್ಕು ದಿನಗಳ ಕಾಲ ಈ ದೀಪೋತ್ಸವ ನಡೆಯಲಿದೆ. ದೀಪೋತ್ಸವಕ್ಕೆ ಆರನೇ ವರ್ಷದ ಸಂಭ್ರಮಾಚರಣೆಯಾಗಿದೆ. ಇದೇ ಮೊದಲ ಬಾರಿಗೆ ಪ್ರಧಾನಿಗಳು ಭಾಗವಹಿಸಿದ್ದಾರೆ.
ಗಿನ್ನೆಸ್ ದಾಖಲೆಯ ದೀಪೋತ್ಸವ:ಯೋಗಿ ಆದಿತ್ಯನಾಥ್ ನೇತೃತ್ವದ ಉತ್ತರಪ್ರದೇಶ ಸರ್ಕಾರ ಗಿನ್ನೆಸ್ ದಾಖಲೆ ಮಾಡಲು 14.5 ಲಕ್ಷ ದೀಪಗಳನ್ನು ಬೆಳಗಿಸುತ್ತಿದೆ. ಕಳೆದ ವರ್ಷ 9 ಲಕ್ಷ ದೀಪಗಳನ್ನು ಹಚ್ಚಲಾಗಿತ್ತು. ಶ್ರೀರಾಮ ತನ್ನ 14 ವರ್ಷದ ವನವಾಸ ಮುಗಿಸಿ ವಾಪಸ್ ಬಂದ ನಂತರ ಜನರು ಇಡೀ ಅಯೋಧ್ಯೆಯನ್ನು ದೀಪಗಳಿಂದ ಅಲಂಕರಿಸಿ, ಸಂಭ್ರಮಿಸಿದ್ದರು ಎಂಬ ಪ್ರತೀತಿಯಿದೆ. ಈ ಹಿನ್ನೆಲೆಯಲ್ಲಿ ಅಯೋಧ್ಯೆಯ ದೀಪಾವಳಿ ಬಹಳ ಪ್ರಸಿದ್ಧಿ ಪಡೆದಿದೆ.
ಓದಿ:ಇನ್ನೆರಡು ವರ್ಷದಲ್ಲಿ ಕಡಿಮೆ ಬೆಲೆಗೆ ಹಾರ್ಟ್ ವಾಲ್ವ್ ಲಭ್ಯ.. ಬಡ ಹೃದ್ರೋಗಿಗಳಿಗೂ ಸಿಗಲಿದೆ ಮರುಜೀವ