ಹುಬ್ಬಳ್ಳಿ: ಭಾರತವು ಯುವಕರ ದೇಶವಾಗಿದೆ. ಜಗತ್ತಿನಲ್ಲಿ ಹೆಚ್ಚಿನ ಯುವಕರನ್ನು ಹೊಂದಿದ ರಾಷ್ಟ್ರವಾಗಿದ್ದು, ಭಾರತೀಯ ಯುವಕರ ಪ್ರತಿಭೆಯನ್ನು ಕಂಡು ಜಗತ್ತು ಬೆರಗುಗೊಳ್ಳುತ್ತಿದೆ. ಪ್ರತಿಯೊಂದು ಕ್ಷೇತ್ರದಲ್ಲೂ ಭಾರತೀಯ ಹೆಣ್ಣು ಮಕ್ಕಳು ಸಹ ತಮ್ಮ ಛಾಪು ಮೂಡಿಸುತ್ತಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಗುಣಗಾನ ಮಾಡಿದರು.
ಹುಬ್ಬಳ್ಳಿಯ ರೈಲ್ವೆ ಮೈದಾನದಲ್ಲಿ ಸ್ವಾಮಿ ವಿವೇಕಾನಂದರ ಜನ್ಮದಿನದ ಅಂಗವಾಗಿ ಹಮ್ಮಿಕೊಂಡಿರುವ 26ನೇ ರಾಷ್ಟ್ರೀಯ ಯುವ ಜನೋತ್ಸವವನ್ನು ಪ್ರಧಾನಿ ಉದ್ಘಾಟಿಸಿದರು. ನಂತರ ತಮ್ಮ ಭಾಷಣ ಆರಂಭಿಸಿದ ಅವರು, ಮೂರು ಸಾವಿರ ಮಠ, ಸಿದ್ಧರೂಢ ಮಠ ಇಂತಹ ಅನೇಕ ಮಠಗಳ ಕ್ಷೇತ್ರಗಳಿಗೆ ನನ್ನ ನಮಸ್ಕಾರಗಳು. ರಾಣಿ ಚೆನ್ನಮ್ಮನ ನಾಡು, ಸಂಗೊಳ್ಳಿ ರಾಯಣ್ಣನ ಬೀಡು, ಈ ಪುಣ್ಯ ಭೂಮಿಗೆ ನನ್ನ ನಮಸ್ಕಾರಗಳು ಎಂದು ಕನ್ನಡದಲ್ಲಿ ಮಾತು ಆರಂಭಿಸಿದರು.
ಕರ್ನಾಟಕದ ಈ ಕ್ಷೇತ್ರವು ತನ್ನ ಪರಂಪರೆ, ಸಂಸ್ಕೃತಿ, ಜ್ಞನಕ್ಕಾಗಿ ಪ್ರಸಿದ್ಧಿ ಪಡೆದಿದೆ. ಇಲ್ಲಿನ ಅನೇಕರಿಗೆ ಜ್ಞಾನ ಪೀಠ ಪುರಸ್ಕಾರದಿಂದ ಸ್ಮಾನಿಸಲಾಗಿದೆ. ಅಲ್ಲದೇ, ಈ ಕ್ಷೇತ್ರವು ದೇಶಕ್ಕೆ ಮಹಾನ್ ಸಂಗೀತಕಾರರನ್ನು ನೀಡಿದೆ. ಪಂಡಿತ್ ಕುಮಾರ ಗಂಧರ್ವ, ಪಂಡಿತ್ ಬಸವರಾಜ ರಾಜಗುರು, ಪಂಡಿತ್ ಮಲ್ಲಿಕಾರ್ಜುನ ಮನ್ಸೂರ್, ಭಾರತ ರತ್ನ ಭೀಮ್ಸೇನ್ ಜೋಷಿ, ಗಂಗೂಬಾಯಿ ಹಾನಗಲ್ ಅವರಿಗೆ ನಮನ ಸಲ್ಲಿಸುತ್ತೇನೆ ಎಂದು ಹೇಳಿದರು. ಇದೇ ವೇಳೆ ಇತ್ತೀಚಿಗೆ ಲಿಂಗೈಕ್ಯರಾದ ಸಿದ್ದೇಶ್ವರ ಸ್ವಾಮೀಜಿ ಅವರಿಗೆ ಪ್ರಧಾನಿ ಶ್ರದ್ಧಾಂಜಲಿ ಸಲ್ಲಿಸಿದರು.
ವಿವೇಕಾನಂದ - ಕರ್ನಾಟಕಕ್ಕೆ ನಂಟಿತ್ತು ಎಂದ ಪ್ರಧಾನಿ: ಯುವ ಸಮೂಹವನ್ನು ಉದ್ದೇಶಿಸಿ ಮಾತು ಮುಂದುವರೆಸಿದ ಪ್ರಧಾನಿ ಮೋದಿ, ಸ್ವಾಮಿ ವಿವೇಕಾನಂದರ ಬಗ್ಗೆ ಸ್ಮರಿಸಿದರು. ವಿವೇಕಾನಂದರ ಅವರಿಗೆ ಕರ್ನಾಟಕದೊಂದಿಗೆ ಅದ್ಭುತವಾದ ಸಂಬಂಧ ಇತ್ತು. ತಮ್ಮ ಜೀವಿತಾವಧಿಯಲ್ಲಿ ಕರ್ನಾಟಕದ ಯಾತ್ರೆ ಮಾಡಿದ್ದರು. ಈ ಸಂದರ್ಭದಲ್ಲಿ ಹುಬ್ಬಳ್ಳಿ ಮತ್ತು ಧಾರವಾಡಕ್ಕೆ ಭೇಟಿ ನೀಡಿದ್ದರು. ಈ ಯಾತ್ರೆ ಮೂಲಕ ಅವರ ಜೀವನಕ್ಕೆ ಹೊಸ ದೆಸೆ ನೀಡಿತ್ತು. ಮೈಸೂರು ಮಹಾರಾಜರು ವಿವೇಕಾನಂದರ ಚಿಕಾಗೋ ಯಾತ್ರೆಗೆ ಸಹಾಯ ಮಾಡಿದ್ದರು ಎಂದರು.