ಪಣಜಿ (ಗೋವಾ):ಮೊದಲ ಬಾರಿಗೆ ಗೋವಾದ ಪಣಜಿಯಲ್ಲಿ ನಡೆಯುತ್ತಿರುವ 37ನೇ ಆವೃತ್ತಿಯ ರಾಷ್ಟ್ರೀಯ ಕ್ರೀಡಾಕೂಟವನ್ನು ಪ್ರಧಾನಿ ನರೇಂದ್ರ ಮೋದಿ ಗುರುವಾರ ಉದ್ಘಾಟಿಸಿದರು. ದಕ್ಷಿಣ ಗೋವಾದ ಮಾರ್ಗಾವೊದಲ್ಲಿರುವ ಪಂಡಿತ್ ಜವಾಹರ್ಲಾಲ್ ನೆಹರು ಕ್ರೀಡಾಂಗಣದಲ್ಲಿ ಅ. 26ರಿಂದ ನ. 9ರವರೆಗೆ ನಡೆಯಲಿರುವ ಕ್ರೀಡಾಕೂಕ್ಕೆ ದೇಶದ ಅಥ್ಲೀಟ್ಗಳು ಹಸ್ತಾಂತರಿಸಿದ ಆಟಗಳನ್ನು ಪ್ರತಿನಿಧಿಸುವ ಜ್ಯೋತಿ(Infinity Flame) ಯನ್ನು ಸ್ವೀಕರಿಸುವ ಮೂಲಕ ಮೋದಿ ಚಾಲನೆ ನೀಡಿದರು.
ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದ ಪ್ರಧಾನಿ ಮೋದಿ, "ಇಂದು ಭಾರತದ ಸಂಕಲ್ಪ ಹಾಗೂ ಪ್ರಯತ್ನಗಳು ದೊಡ್ಡ ಮಟ್ಟದಲ್ಲಿರುವಾಗ ಅದಕ್ಕೆ ತಕ್ಕಂತೆ ಆಕಾಂಕ್ಷೆಗಳು ಹೆಚ್ಚಾಗುವುದು ಕೂಡ ಸಹಜವೇ. ಹಾಗಾಗಿಯೇ ಐಒಸಿ (IOC) ಅಧಿವೇಶನದಲ್ಲಿ 140 ಕೋಟಿ ಭಾರತೀಯರ ಆಕಾಂಕ್ಷೆಯನ್ನು ಮುಂದಿಟ್ಟಿದ್ದು, 2030 ಹಾಗೂ 2036ರಲ್ಲಿ ಯೂತ್ ಒಲಿಂಪಿಕ್ಸ್ ಆಯೋಜಿಸಲು ಭಾರತ ಸಿದ್ಧವಾಗಿದೆ ಎನ್ನುವ ಭರವಸೆಯನ್ನು ಒಲಿಂಪಿಕ್ಸ್ನ ಸುಪ್ರೀಂ ಸಮಿತಿಗೆ ನೀಡಿದ್ದೇನೆ. ಭಾರತದಲ್ಲಿ ಒಲಿಂಪಿಕ್ಸ್ ಆಯೋಜಿಸುವ ನಮ್ಮ ಆಶಯ ಕೇವಲ ಒಂದು ಭಾವನೆ ಮಾತ್ರವಲ್ಲದೇ ಅದರ ಹಿಂದೆ ಬಲವಾದ ಕಾರಣಗಳಿವೆ. 2036ರಲ್ಲಿ ಸುಲಭವಾಗಿ ಒಲಿಂಪಿಕ್ಸ್ ಅನ್ನು ಆಯೋಜನೆ ಮಾಡುವಷ್ಟು ಭಾರತದ ಆರ್ಥಿಕತೆ ಹಾಗೂ ಮೂಲಸೌಕರ್ಯ ಅಭಿವೃದ್ಧಿ ಹೊಂದಿರುತ್ತದೆ." ಎಂದು ಹೇಳಿದರು.
"ನಮ್ಮ ರಾಷ್ಟ್ರೀಯ ಕ್ರೀಡಾಕೂಟ ಕೂಡ ಏಕ್ ಭಾರತ್ ಶ್ರೇಷ್ಠ ಭಾರತ್ನ ಸಂಕೇತವಾಗಿದೆ. ಕೆಲವು ವರ್ಷಗಳಲ್ಲಿ ಸಂಪರ್ಕಕ್ಕೆ ಸಂಬಂಧಿಸಿದ ಆಧುನಿಕ ಮೂಲಸೌಕರ್ಯಗಳನ್ನು ಸಹ ಗೋವಾದಲ್ಲಿ ನಿರ್ಮಿಸಲಾಗಿದೆ. 15 ದಿನಗಳ ಕಾಲ ಗೋವಾದಲ್ಲಿ ನಡೆಯಲಿರುವ ಈ ರಾಷ್ಟ್ರೀಯ ಕ್ರೀಡಾಕೂಟದಿಂದ ಗೋವಾದ ಪ್ರವಾಸೋದ್ಯಮ ಹಾಗೂ ಆರ್ಥಿಕತೆಗೂ ಹೆಚ್ಚು ಪ್ರಯೋಜನವಾಗಲಿದೆ" ಎಂದು ಹೇಳಿದರು.