ಚೆನ್ನೈ (ತಮಿಳುನಾಡು): ಪ್ರಧಾನಿ ನರೇಂದ್ರ ಮೋದಿ ಶನಿವಾರ ಚೆನ್ನೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ 1,260 ಕೋಟಿ ರೂಪಾಯಿ ವೆಚ್ಚದ ಹೊಸ ಇಂಟಿಗ್ರೇಟೆಡ್ ಟರ್ಮಿನಲ್ ಕಟ್ಟಡ (New Integrated Terminal Building-NITB) ವನ್ನು ಉದ್ಘಾಟಿಸಿದರು. ರಾಜ್ಯದ ಶ್ರೀಮಂತ ಸಂಸ್ಕೃತಿ ಮತ್ತು ಪರಂಪರೆಯನ್ನು ಬಿಂಬಿಸುವುದರೊಂದಿಗೆ ಎನ್ಐಟಿಬಿ ಅನನ್ಯವಾಗಿ ವಿನ್ಯಾಸಗೊಳಿಸಲಾಗಿದೆ.
ಹೈದರಾಬಾದ್ ಪ್ರವಾಸದ ಬಳಿಕ ಪ್ರಧಾನಿ ಮೋದಿ ವಿಮಾನದಲ್ಲಿ ಚೆನ್ನೈಗೆ ಬಂದಿಳಿದರು. ಅವರನ್ನು ರಾಜ್ಯಪಾಲ ಆರ್‌ಎನ್ ರವಿ, ಮುಖ್ಯಮಂತ್ರಿ ಎಂಕೆ ಸ್ಟಾಲಿನ್, ಸಚಿವರು, ಸಂಸದರು ಮತ್ತು ಇತರ ಗಣ್ಯರು ಸ್ವಾಗತಿಸಿದರು. ನಂತರ ಹೊಸ ಇಂಟಿಗ್ರೇಟೆಡ್ ಟರ್ಮಿನಲ್ ಕಟ್ಟಡದ ಒಂದನೇ ಹಂತವನ್ನು ಪ್ರಧಾನಿ ಉದ್ಘಾಟಿಸಿದರು. ಇದೇ ವೇಳೆ ಮೋದಿ ಟರ್ಮಿನಲ್ಅನ್ನು ಸುತ್ತಾಡಿ ವೀಕ್ಷಿಸಿದರು. ಸಿಎಂ ಸ್ಟಾಲಿನ್, ಕೇಂದ್ರ ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾಧಿತ್ಯ ಎಂ ಸಿಂಧಿಯಾ ಜೊತೆಗಿದ್ದರು. ಈ ಸಂದರ್ಭದಲ್ಲಿ ಪ್ರಧಾನಿ ಮತ್ತು ಸಿಎಂ ಇಬ್ಬರೂ ಸೌಹಾರ್ದಯುತವಾಗಿ ಕಾಣಿಸಿಕೊಂಡರು. ಅಲ್ಲದೇ, ಇಬ್ಬರು ಪರಸ್ಪರ ಕೈ ಹಿಡಿದುಕೊಂಡು ಮುಗುಳ್ನಕ್ಕರು.
ಈ ಹೊಸ ಇಂಟಿಗ್ರೇಟೆಡ್ ಟರ್ಮಿನಲ್ ಕಟ್ಟಡವು ವಿಮಾನ ನಿಲ್ದಾಣದ ಪ್ರಯಾಣಿಕರ ಸೇವೆಯ ಸಾಮರ್ಥ್ಯವನ್ನು ವಾರ್ಷಿಕ 23 ಮಿಲಿಯನ್ ಪ್ರಯಾಣಿಕರಿಂದ 30 ಮಿಲಿಯನ್ಗೆ ಹೆಚ್ಚಿಸುತ್ತದೆ. ಹೊಸ ಟರ್ಮಿನಲ್ ಸ್ಥಳೀಯ ತಮಿಳು ಸಂಸ್ಕೃತಿಯ ಪ್ರತಿಬಿಂಬವಾಗಿದೆ. ಸಾಂಪ್ರದಾಯಿಕ ವೈಶಿಷ್ಟ್ಯಗಳಾದ ಕೋಲಂ, ಸೀರೆ, ದೇವಾಲಯಗಳು ಮತ್ತು ನೈಸರ್ಗಿಕ ಪರಿಸರವನ್ನು ಎತ್ತಿ ತೋರಿಸುವ ಅಂಶಗಳನ್ನು ಕಟ್ಟಡವು ಒಳಗೊಂಡಿದೆ ಎಂದು ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರದ ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ:ಸಿಕಂದರಾಬಾದ್ - ತಿರುಪತಿ ವಂದೇ ಭಾರತ್ ಎಕ್ಸ್‌ಪ್ರೆಸ್‌ಗೆ ಪ್ರಧಾನಿ ಮೋದಿ ಹಸಿರು ನಿಶಾನೆ