ನವದೆಹಲಿ : ಈ ವರ್ಷಾಂತ್ಯದ ಬಳಿಕ ನಡೆಯಲಿರುವ ಮಹತ್ವದ ವಿಧಾನಸಭಾ ಚುನಾವಣೆ ಹಾಗೂ 2024 ರ ಲೋಕಸಭೆ ಚುನಾವಣೆಗೆ ಭಾರತೀಯ ಜನತಾ ಪಕ್ಷ ಈಗಿನಿಂದಲೇ ಸಿದ್ಧತೆ ಆರಂಭಿಸಿದೆ. ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಸೇರಿದಂತೆ ಬಿಜೆಪಿ ಪಕ್ಷದ ಉನ್ನತ ನಾಯಕರು ಬುಧವಾರ ರಾಷ್ಟ್ರರಾಜಧಾನಿ ದೆಹಲಿಯಲ್ಲಿ ಸಭೆ ನಡೆಸಿ ಸರ್ಕಾರ ಮತ್ತು ಸಂಘಟನೆಯಲ್ಲಿ ಬದಲಾವಣೆಯ ಕುರಿತು ಚರ್ಚಿಸಿದರು. ಈ ವೇಳೆ ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಕೂಡ ಸಭೆಯಲ್ಲಿ ಭಾಗವಹಿಸಿದ್ದರು.
ಸಭೆಯ ಕುರಿತು ಯಾವುದೇ ಅಧಿಕೃತ ಹೇಳಿಕೆ ಹೊರಬಿದ್ದಿಲ್ಲ. ಶಾ, ನಡ್ಡಾ ಮತ್ತು ಬಿಜೆಪಿ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಬಿಎಲ್ ಸಂತೋಷ್ ಅವರು ಸಾಂಸ್ಥಿಕ ಮತ್ತು ರಾಜಕೀಯ ವಿಷಯಗಳ ಕುರಿತು ಆಗಾಗ ಸಭೆಗಳನ್ನು ನಡೆಸುತ್ತಿರುವ ಬೆನ್ನಲ್ಲೇ ಈ ಸಭೆ ನಡೆದಿದೆ. ಮಾಧ್ಯಮ ವರದಿಗಳ ಪ್ರಕಾರ, ಸಭೆಯಲ್ಲಿ ಬಿಜೆಪಿಯ ಸಂಘಟನೆ ಮತ್ತು ಸರ್ಕಾರದ ಬದಲಾವಣೆಯ ಬಗ್ಗೆ ಚರ್ಚೆ ನಡೆದಿದೆ ಎನ್ನಲಾಗಿದೆ.
2024 ರಲ್ಲಿ ನಡೆಯಲಿರುವ ಲೋಕಸಭೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಈ ಸಭೆ ನಡೆದಿದ್ದು, ಅತ್ಯಂತ ಮಹತ್ವಪೂರ್ಣವಾಗಿದೆ ಎಂದು ಪರಿಗಣಿಸಲಾಗಿದೆ. ಈ ಬೆನ್ನಲ್ಲೇ, ಗುಜರಾತ್ ಮತ್ತು ಕರ್ನಾಟಕದಲ್ಲಿ ಬಿಜೆಪಿ ಹೊಸ ರಾಜ್ಯಾಧ್ಯಕ್ಷರನ್ನು ಶೀಘ್ರದಲ್ಲೇ ಘೋಷಿಸುವ ಸಾಧ್ಯತೆ ಇದೆ. ಇದಲ್ಲದೆ, ಮೇರಾ ಬೂತ್ ಸಬ್ಸೆ ಶಕ್ತಿ ಕಾರ್ಯಕ್ರಮದ ಬಗ್ಗೆಯೂ ಚರ್ಚೆ ನಡೆಸಲಾಗಿದೆ.
ಇದನ್ನೂ ಓದಿ :ಮುಸ್ಲಿಂ ಬಹುಸಂಖ್ಯಾತ ದೇಶಗಳಲ್ಲಿ ತ್ರಿವಳಿ ತಲಾಖ್ ಕಾನೂನು ಪದ್ಧತಿ ಇಲ್ಲ : ಪ್ರಧಾನಿ ಮೋದಿ