ನವದೆಹಲಿ:ಮಣಿಪುರ ಸಂಘರ್ಷದ ಹಿನ್ನೆಲೆಯಲ್ಲಿಸಂಸತ್ತಿನ ಉಭಯ ಸದನಗಳಲ್ಲಿ ಪ್ರತಿಪಕ್ಷಗಳ ಗದ್ದಲದ ನಡುವೆ ಇಂದು ಪ್ರಧಾನಿ ಮೋದಿ ನೇತೃತ್ವದಲ್ಲಿ ಬಿಜೆಪಿ ಸಂಸದೀಯ ಪಕ್ಷದ ಸಭೆ ನಡೆಯಿತು. ಮೋದಿ ತಮ್ಮ ಭಾಷಣದಲ್ಲಿ ಪ್ರತಿಪಕ್ಷಗಳ ಮೈತ್ರಿ 'ಇಂಡಿಯಾ' ವಿರುದ್ಧ ವಾಗ್ದಾಳಿ ನಡೆಸಿದರು. ಈಸ್ಟ್ ಇಂಡಿಯಾ ಕಂಪನಿ, ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಮತ್ತು ಇಂಡಿಯನ್ ಮುಜಾಹಿದ್ದೀನ್ ಹೆಸರುಗಳನ್ನು ಪ್ರಸ್ತಾಪಿಸಿದ ಅವರು, ಇಂಡಿಯಾ ಎಂಬ ಹೆಸರಿಟ್ಟ ಮಾತ್ರಕ್ಕೆ ಅವು ದೇಶಭಕ್ತಿಯನ್ನು ಸೂಚಿಸುವುದಿಲ್ಲ. ಪ್ರತಿಪಕ್ಷಗಳು ಜನರನ್ನು ದಾರಿತಪ್ಪಿಸಲು ಇಂಡಿಯಾ ಎಂಬ ಹೆಸರನ್ನಿಟ್ಟುಕೊಂಡಿವೆ. ಆದರೆ ದೇಶದ ಹೆಸರು ಬಳಸಿಕೊಂಡು ಜನರನ್ನು ದಾರಿತಪ್ಪಿಸಲು ಸಾಧ್ಯವಿಲ್ಲ ಎಂದು ಚಾಟಿ ಬೀಸಿದರು.
ಇನ್ನೊಂದೆಡೆ, ಬಿಜೆಪಿ ಸರ್ಕಾರದ ವಿರುದ್ಧ ಸಂಸತ್ತಿನಲ್ಲಿ ಅವಿಶ್ವಾಸ ಗೊತ್ತುವಳಿ ನಿರ್ಣಯ ಮಂಡಿಸಲು ಪ್ರತಿಪಕ್ಷಗಳು ಚಿಂತನೆ ನಡೆಸುತ್ತಿವೆ. ಇದರ ಭಾಗವಾಗಿ ಇಂದು ಲೋಕಸಭೆ ಪ್ರತಿಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರ ಸಂಸತ್ ಭವನದ ಕೊಠಡಿಯಲ್ಲಿ ಮಹತ್ವದ ಸಭೆ ನಡೆಯಿತು. ಮಣಿಪುರದಲ್ಲಿ ನಡೆಯುತ್ತಿರುವ ಜನಾಂಗೀಯ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಸಭೆ ಸೇರಿದ 26 ಪಕ್ಷಗಳನ್ನು ಒಳಗೊಂಡ ಪ್ರತಿಪಕ್ಷಗಳ ಬಣವು, ಪ್ರಧಾನಿ ನರೇಂದ್ರ ಮೋದಿಯವರು ಸಂಸತ್ತಿನಲ್ಲಿ ಮಾತನಾಡುವಂತೆ ಒತ್ತಾಯಿಸಲು ತೀರ್ಮಾನಿಸಿದವು.
ಜುಲೈ 20ರಂದು ಪ್ರಾರಂಭವಾದ ಮುಂಗಾರು ಅಧಿವೇಶನ ಇಂದು 4ನೇ ದಿನಕ್ಕೆ ಕಾಲಿಟ್ಟಿದ್ದು, ಯಾವುದೇ ಸಾರ್ವಜನಿಕ ಕಾಳಜಿಯ ವಿಷಯದ ಚರ್ಚೆ ಮತ್ತು ಮಸೂದೆಗಳ ಮಂಡನೆಯಾಗದೇ ಪ್ರತಿಪಕ್ಷಗಳ ಪ್ರತಿಭಟನೆಯಿಂದಾಗಿ ಮುಂದೂಡಿಕೆಯಾಗುತ್ತಿದೆ. ಆಗಸ್ಟ್ 11ರವರೆಗೆ ಅಧಿವೇಶನ ಮುಂದುವರಿಯಲಿದೆ. ಮಣಿಪುರ ಬಿಕ್ಕಟ್ಟಿಗೆ ಸಂಬಂಧಿಸಿದಂತೆ ಮೋದಿ ಅವರಿಂದ ಸಮಗ್ರ ಹೇಳಿಕೆ ಪಡೆಯಲು ಪ್ರತಿಪಕ್ಷಗಳು ಧರಣಿ ನಡೆಸುತ್ತಿವೆ. ಪ್ರತಿಭಟನೆ ಹಿಂಪಡೆಯಲು ವಿಪಕ್ಷಗಳ ಸಂಸದರು ನಿರಾಕರಿಸುತ್ತಿದ್ದು ಮಣಿಪುರ ಪರಿಸ್ಥಿತಿಯ ಬಗ್ಗೆ ಪ್ರಧಾನಿ ಪ್ರತಿಕ್ರಿಯೆ ನೀಡಲೇಬೇಕು. ಇದರ ಜೊತೆಗೆ, ರಾಜ್ಯಸಭೆಯಿಂದ ಆಪ್ ಸದಸ್ಯ ಸಂಜಯ್ ಸಿಂಗ್ ಅವರ ಅಮಾನತು ಆದೇಶ ಹಿಂಪಡೆದುಕೊಳ್ಳಬೇಕು ಎಂದು ಒತ್ತಾಯಿಸಿವೆ.