ಈರೋಡ್(ತಮಿಳುನಾಡು) :ತಮಿಳುನಾಡನ್ನ ಮುಖ್ಯಭೂಮಿಕೆಗೆ ತಂದಿದ್ದು ಪ್ರಧಾನಿ ನರೇಂದ್ರ ಮೋದಿ ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ ಪಿ ನಡ್ಡಾ ಹೇಳಿದ್ದಾರೆ.
ವಿಧಾನಸಭೆ ಚುನಾವಣೆ ಹಿನ್ನೆಲೆ ತಮಿಳುನಾಡಿನ ಈರೋಡ್‌ನಲ್ಲಿ ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ ಪಿ ನಡ್ಡಾ ಸಾರ್ವಜನಿಕ ರ‍್ಯಾಲಿಯನ್ನುದ್ದೇಶಿಸಿ ಮಾತನಾಡಿದರು. ಪ್ರಧಾನಿ ಮೋದಿ ತಮಿಳುನಾಡನ್ನು ಮುಖ್ಯವಾಹಿನಿಗೆ ತಂದಿದ್ದಾರೆ. 13ನೇ ಹಣಕಾಸು ಆಯೋಗದಲ್ಲಿ ತಮಿಳುನಾಡಿಗೆ ಕೇವಲ 94,000 ಕೋಟಿ ರೂ. ಮಾತ್ರ ಅನುದಾನ ಸಿಕ್ಕಿತ್ತು.
ಆದರೆ, ಪಿಎಂ ಮೋದಿ ನೇತೃತ್ವದ 14ನೇ ಹಣಕಾಸು ಆಯೋಗದಲ್ಲಿ ರಾಜ್ಯಕ್ಕೆ 5.42 ಲಕ್ಷ ಕೋಟಿ ರೂ. ಸಿಕ್ಕಿದೆ. ಇದು ಈ ಹಿಂದಿಗಿಂತ 4.5 ಪಟ್ಟು ಹೆಚ್ಚು ಎಂದು ನಡ್ಡಾ ಹೇಳಿದರು. ರಾಷ್ಟ್ರದಲ್ಲೇ ಅತಿ ಹೆಚ್ಚು ಸಂಖ್ಯೆಯ ಅಂದರೆ 11 ವೈದ್ಯಕೀಯ ಕಾಲೇಜುಗಳನ್ನು ತಮಿಳುನಾಡಿಗೆ ನೀಡಲಾಗಿದೆ.
ಮುದ್ರಾ ಯೋಜನೆಯ ಗರಿಷ್ಠ ಫಲಾನುಭವಿಗಳು ತಮಿಳುನಾಡಿನವರು. ರೇಷ್ಮೆ ಅಭಿವೃದ್ಧಿಗೆ 1,600 ಕೋಟಿ ರೂ.ಗಳನ್ನು ಮೀಸಲಿಡಲಾಗಿದೆ. ತಂಜಾವೂರಿನ ವರ್ಣಚಿತ್ರಗಳು, ಮರದ ಕೆತ್ತನೆಗಳು, ಕೈಮಗ್ಗ ನೇಯ್ಗೆ, ಕಲ್ಲು ಕೆತ್ತನೆ ಸೇರಿ ಅನೇಕ ವೃತ್ತಿಗಳಿಗೆ 'ಲೋಕಲ್ ಫಾರ್ ವೋಕಲ್'ಅಡಿ ಪ್ರೋತ್ಸಾಹಿಸಲಾಗುತ್ತಿದೆ ಎಂದರು.