ನವದೆಹಲಿ:ಭಾರತದ ಅಧ್ಯಕ್ಷತೆಯಲ್ಲಿ ಇಲ್ಲಿ ನಡೆದ ಜಿ20 ಶೃಂಗಸಭೆಯು ಹಲವಾರು ಚರಿತ್ರೆಗಳನ್ನು ಸೃಷ್ಟಿಸಿದ್ದು, ಮುಂದಿನ ಶೃಂಗದ ಅಧ್ಯಕ್ಷತೆಯ ಹೊಣೆಯನ್ನು ಬ್ರೆಜಿಲ್ ದೇಶಕ್ಕೆ ಹಸ್ತಾಂತರಿಸಲಾಗಿದೆ. ಭಾನುವಾರ ಪ್ರಧಾನಿ ನರೇಂದ್ರ ಮೋದಿ ಅವರು ದಂಡವನ್ನು ಬ್ರೆಜಿಲ್ ಅಧ್ಯಕ್ಷ ಲೂಯಿಸ್ ಇನ್ಸಿಯೊ ಲುಲಾ ಡಾ ಸಿಲ್ವಾ ಅವರಿಗೆ ನೀಡಿ, ಮುಂದಿನ ಅಧ್ಯಕ್ಷತೆಗೆ ಶುಭ ಕೋರಿದರು. ಬ್ರೆಜಿಲ್ ಅಧಿಕೃತವಾಗಿ ಈ ವರ್ಷದ ಡಿಸೆಂಬರ್ 1 ರಂದು ಒಕ್ಕೂಟದ ಅಧ್ಯಕ್ಷ ಸ್ಥಾನವನ್ನು ವಹಿಸಿಕೊಳ್ಳಲಿದೆ.
ಈ ಸಂದರ್ಭದಲ್ಲಿ ಮಾತನಾಡಿದ ಲುಲಾ ಡ ಸಿಲ್ವಾ ಅವರು, ಜಿ20 ಶೃಂಗಸಭೆಯನ್ನು ಭಾರತದಲ್ಲಿ ಅತ್ಯಂತ ಯಶಸ್ವಿಯಾಗಿ ಮುನ್ನಡೆಸಿದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಅಭಿನಂದಿಸಿದರು. ಆರ್ಥಿಕತೆ ಬೆಳವಣಿಗೆಗೆ ಧ್ವನಿ ನೀಡುವ ಭಾರತದ ಪ್ರಯತ್ನಗಳಿಗೆ ಧನ್ಯವಾದಗಳು. ಸಾಮಾಜಿಕ ಸೇರ್ಪಡೆ, ಹಸಿವಿನ ವಿರುದ್ಧ ಹೋರಾಟ, ಶಕ್ತಿ ಪರಿವರ್ತನೆ ಮತ್ತು ಸುಸ್ಥಿರ ಅಭಿವೃದ್ಧಿಯನ್ನು ಜಿ20 ಶೃಂಗದ ಆದ್ಯತಾ ಪಟ್ಟಿಯಲ್ಲಿ ಸೇರಿಸಿದ್ದಕ್ಕೆ ಶ್ಲಾಘಿಸಿದರು.
ವಿಶ್ವ ಬ್ಯಾಂಕ್ ಮತ್ತು ಅಂತಾರಾಷ್ಟ್ರೀಯ ಹಣಕಾಸು ನಿಧಿಯಲ್ಲಿ ಉದಯೋನ್ಮುಖ ರಾಷ್ಟ್ರಗಳಿಗೆ ಹೆಚ್ಚಿನ ಪ್ರಾತಿನಿಧ್ಯವನ್ನು ನೀಡುವ ಬಗ್ಗೆ ನಾವು ಬಯಸುತ್ತೇವೆ ಎಂದು ಅವರು ಹೇಳಿದರು.
ಇದಕ್ಕೂ ಮುನ್ನ, ಜಿ20 ಶೃಂಗಸಭೆಯಲ್ಲಿ ಭಾಗಿಯಾಗಲು ಬ್ರೆಜಿಲ್ ಅಧ್ಯಕ್ಷ ಸಿಲ್ವಾ ಅವರು ಭಾರತಕ್ಕೆ ಆಗಮಿಸಿದಾಗ ಸ್ವಾಗತಿಸಿದ ಚಿತ್ರವನ್ನು ಪ್ರಧಾನಿ ಮೋದಿ ಅವರು ಎಕ್ಸ್ನಲ್ಲಿ (ಹಿಂದಿನ ಟ್ವಿಟರ್) ಹಂಚಿಕೊಂಡಿದ್ದರು. 'ಅಧ್ಯಕ್ಷ ಲುಲಾ ಅವರನ್ನು ಭಾರತಕ್ಕೆ ಸ್ವಾಗತಿಸಲು ಸಂತೋಷವಾಗಿದೆ. ನಾನು ಅವರನ್ನು ಇತ್ತೀಚೆಗೆ ಜೋಹಾನ್ಸ್‌ಬರ್ಗ್‌ನಲ್ಲಿ ಭೇಟಿಯಾಗಿದ್ದೆ. ಜಿ 20 ಶೃಂಗಸಭೆಯಲ್ಲಿ ಅವರನ್ನು ಮತ್ತೆ ಭೇಟಿಯಾಗುವ ಅವಕಾಶ ಸಿಕ್ಕಿರುವುದಕ್ಕೆ ಸಂತೋಷವಾಗಿದೆ ಎಂದು ಬರೆದುಕೊಂಡಿದ್ದರು.