ನವದೆಹಲಿ:ಭಾರತ ಪ್ರವಾಸದಲ್ಲಿರುವ ಜಪಾನ್ ಪ್ರಧಾನಿ ಫ್ಯೂಮಿಯೊ ಕಿಶಿಡಾ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಕರ್ನಾಟಕದಲ್ಲಿ ಶ್ರೀಗಂಧದಿಂದ ತಯಾರಿಸಿದ ವಿಶೇಷ 'ಗೌತಮ ಬುದ್ಧನ ಮೂರ್ತಿ'ಯನ್ನು ಉಡುಗೊರೆಯಾಗಿ ನೀಡಿದ್ದಾರೆ. ಕಿಶಿಡಾ ಎರಡು ದಿನಗಳ ಭಾರತ ಭೇಟಿಯಲ್ಲಿದ್ದಾರೆ. ಈ ಕಲಾಕೃತಿಯು ಕರ್ನಾಟಕದ ಶ್ರೀಮಂತ ಕಲಾ ಪರಂಪರೆಯನ್ನು ಪ್ರತಿನಿಧಿಸುತ್ತದೆ.
ಗಿಫ್ಟ್ ವಿಶೇಷತೆ:ಶ್ರೀಗಂಧದಬುದ್ಧನ ಪ್ರತಿಮೆ ಮತ್ತು ಪೆಟ್ಟಿಗೆಯನ್ನು ಕರ್ನಾಟಕದ ಕುಶಲಕರ್ಮಿಗಳು ಕೈಗಳಿಂದಲೇ ಸುಂದರವಾಗಿ ನಿರ್ಮಿಸಿದ್ದಾರೆ. ಬುದ್ಧ ಬೋಧಿ ವೃಕ್ಷದ ಕೆಳಗೆ 'ಧ್ಯಾನ ಮುದ್ರೆ'ಯಲ್ಲಿರುವ ಭಂಗಿಯಲ್ಲಿ ಇದನ್ನು ಕೆತ್ತಲಾಗಿದೆ. ಕದಂಬ ಮರದಿಂದ ಮಾಡಿದ ಜಾಲಿ ಪೆಟ್ಟಿಗೆಯಲ್ಲಿ ಪ್ರತಿಮೆಯನ್ನು ಇರಿಸಲಾಗಿದೆ. ಕದಂಬ ಮರವನ್ನು ಭಾರತೀಯ ಸಂಸ್ಕೃತಿಯಲ್ಲಿ ಶುಭ ಎಂದು ಪರಿಗಣಿಸಲಾಗಿದೆ. ಕದಂಬ ಮರದ ಪೆಟ್ಟಿಗೆಯನ್ನು ಕೂಡಾ ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ. ಇದನ್ನೂ ಕೂಡ ಸಾಂಪ್ರದಾಯಿಕ ಕಲಾವಿದರು ಕೈಯಿಂದಲೇ ರಚಿಸಿದ್ದಾರೆ. ಪ್ರಾಣಿ-ಪಕ್ಷಿಗಳು ಮತ್ತು ಅನೇಕ ನೈಸರ್ಗಿಕ ದೃಶ್ಯಗಳನ್ನು ಈ ಪೆಟ್ಟಿಗೆಯ ಮೇಲೆ ಅದ್ಭುತವಾಗಿ ಕೆತ್ತಿರುವುದನ್ನು ನೋಡಬಹುದು.
ಶ್ರೀಗಂಧ ಭಾರತದ ಶ್ರೇಷ್ಠ ಮರ. ಶತಮಾನಗಳಿಂದ ದೇಶದ ಶ್ರೀಮಂತ ಸಂಸ್ಕೃತಿಯ ಭಾಗ. ವಿಶ್ವದ ಅಮೂಲ್ಯ ಮರಗಳಲ್ಲಿ ಒಂದೆಂದೂ ಪರಿಗಣಿಸಲಾಗಿದೆ. ಆಯುರ್ವೇದದಲ್ಲಿಯೂ ಶ್ರೀಗಂಧ ಪ್ರಮುಖ ಸ್ಥಾನ ಹೊಂದಿದೆ. ಇದರಿಂದ ಸಾಕಷ್ಟು ಔಷಧೀಯ ಮತ್ತು ಆಧ್ಯಾತ್ಮಿಕ ಉಪಯೋಗಗಳಿವೆ. ವಿಗ್ರಹಗಳನ್ನು ತಯಾರಿಕೆ ಮತ್ತು ದೇವಾಲಯ, ಧಾರ್ಮಿಕ ಸ್ಥಳಗಳನ್ನು ಕೆತ್ತಲು ಶ್ರೀಗಂಧವನ್ನು ಅನಾದಿ ಕಾಲದಿಂದಲೂ ಬಳಸಲಾಗುತ್ತಿದೆ.
ಉಡುಗೊರೆ ನೀಡಿದ್ದು ಇದು ಮೊದಲಲ್ಲ: ಪ್ರಧಾನಿ ನರೇಂದ್ರ ಮೋದಿ ಅವರು ವಿದೇಶಿ ನಾಯಕರಿಗೆ ಕಲಾಕೃತಿಗಳನ್ನು ಉಡುಗೊರೆಯಾಗಿ ನೀಡಿದ್ದು ಇದು ಮೊದಲಲ್ಲ. ಫೆ.27 ರಂದು ನವದೆಹಲಿಗೆ ಭೇಟಿ ನೀಡಿದ ಜರ್ಮನ್ ಚಾನ್ಸೆಲರ್ ಓಲಾಫ್ ಸ್ಕೋಲ್ಜ್ ಅವರಿಗೆ ಮೇಘಾಲಯ ಮತ್ತು ನಾಗಾಲ್ಯಾಂಡ್ ವಿಶೇಶ ಸಾಂಪ್ರದಾಯಿಕ ಶಾಲು ಉಡುಗೊರೆಯಾಗಿ ನೀಡಿದ್ದರು. ಕಳೆದ ವರ್ಷ ನ.15 ಮತ್ತು 16 ರಂದು ಇಂಡೋನೇಷ್ಯಾದ ಬಾಲಿಯಲ್ಲಿ ನಡೆದ ಜಿ-20 ಶೃಂಗಸಭೆಯ ಸಂದರ್ಭದಲ್ಲಿ ಭೇಟಿಯಾದ ವಿದೇಶಿ ನಾಯಕರಿಗೆ ಪ್ರಧಾನಿ ಅವರು ಗುಜರಾತ್‌ನ ಸಾಂಪ್ರದಾಯಿಕ ಕಲಾಕೃತಿಗಳನ್ನು ಉಡುಗೊರೆಯಾಗಿ ನೀಡಿದ್ದರು. ಯುಕೆಯ ನೂತನ ಪ್ರಧಾನ ಮಂತ್ರಿ ರಿಷಿ ಸುನಕ್ ಅವರಿಗೆ ಗುಜರಾತ್‌ನಲ್ಲಿ ತಯಾರಿಸಿದ ಕೈಯಿಂದ ಮಾಡಿದ, "ಮಾತಾ ನಿ ಪಚೇಡಿ"(ಗುಜರಾತನ ಕೈಮಗ್ಗದ ಜವಳಿ) ಉಡುಗೊರೆಯಾಗಿ ಕೊಟ್ಟಿದ್ದರು.
ಇದನ್ನೂ ಓದಿ:ಜಿ 20 ಶೃಂಗಸಭೆಯಲ್ಲಿ ಜಾಗತಿಕ ನಾಯಕರಿಗೆ ಗುಜರಾತ್- ಹಿಮಾಚಲ ಪ್ರದೇಶದ ಕಲಾಕೃತಿಗಳನ್ನು ಉಡುಗೊರೆ ನೀಡಿದ ಪ್ರಧಾನಿ ಮೋದಿ