ಶಿಮ್ಲಾ/ ಬಾಲಿ( ಇಂಡೋನೇಷ್ಯಾ): ಬಾಲಿಯಲ್ಲಿ ನಡೆಯುತ್ತಿರುವ 'ಜಿ 20' ಶೃಂಗಸಭೆಯಲ್ಲಿ ಜಾಗತಿಕ ನಾಯಕರಿಗೆ ಪ್ರಧಾನಿ ಮೋದಿ, ಗುಜರಾತ್ ಮತ್ತು ಹಿಮಾಚಲ ಪ್ರದೇಶದ ಭವ್ಯ ಐತಿಹಾಸಿಕ, ಸಂಸ್ಕೃತಿ ಸಾರುವ ಕಲಾಕೃತಿಗಳನ್ನು ಉಡುಗೊರೆಯಾಗಿ ನೀಡಿ ಗಮನ ಸೆಳೆದಿದ್ದಾರೆ.
ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರಿಗೆ ಶೃಂಗಾರ ರಸದ ಕಾಂಗ್ರಾ ವರ್ಣರಂಜಿತ ಕಲಾಕೃತಿಯನ್ನು ಉಡುಗೊರೆಯಾಗಿ ನೀಡಿದರು. ಈ ಕಲಾಕೃತಿ ಪ್ರೀತಿ ಮತ್ತು ಅಧ್ಯಾತ್ಮಿಕತೆ ಒಳಗೊಂಡಿದ್ದು, ಪಹರಿ ಪೈಟಿಂಗ್ ಥೀಮ್ ಹೊಂದಿದೆ. ಕಾಂಗ್ರಾದ ಈ ವರ್ಣ ಕಲಾಕೃತಿಯಲ್ಲಿ ನೈಸರ್ಗಿಕ ಬಣ್ಣಗಳನ್ನು ಬಳಸಲಾಗುತ್ತದೆ.
ಸುನಕ್ಗೆ ಮಾತಾ ನಿ ಪಚೇಡಿ ಗಿಫ್ಟ್: ಇಂಗ್ಲೆಂಡ್ ಪ್ರಧಾನಿ ರಿಷಿ ಸುನಕ್ ಅವರಿಗೆ, ದೇಗುಲಗಳಲ್ಲಿ ದೇವತೆಗಳಿಗೆ ಅರ್ಪಿಸುವ 'ಮಾತಾ ನಿ ಪಚೇಡಿಯ' ಗುಜರಾತನ ಕೈಮಗ್ಗದ ಜವಳಿಯನ್ನು ಉಡುಗೊರೆಯಾಗಿ ನೀಡಿದರು ಎಂದು ಅಧಿಕೃತ ಮೂಲಗಳು ತಿಳಿಸಿವೆ. ಜಿ 20 ಶೃಂಗಸಭೆ ಆತಿಥ್ಯವಹಿಸಿದ ಇಂಡೋನೇಷ್ಯಾದ ಅಧ್ಯಕ್ಷರಾದ ಜೋಕೊ ವಿಡೋಡೊ ಅವರಿಗೆ ಹಿಮಾಚಲ ಪ್ರದೇಶದ ಕಿನ್ನೂರ್ನ ಕುಶಲಕರ್ಮಿಗಳಿಂದ ತಯಾರಿಸಲಾದ ಕಿನ್ನೌರಿ ಶಾಲು ಜೊತೆಗೆ ಸೂರತ್ನ ಬೆಳ್ಳಿ ಬಟ್ಟಲನ್ನು ಕಾಣಿಕೆಯಾಗಿ ನೀಡಿದರು.