ಭರೂಚ್(ಗುಜರಾತ್):ಪ್ರಧಾನಿ ನರೇಂದ್ರ ಮೋದಿ ತವರು ರಾಜ್ಯ ಗುಜರಾತ್ನ ಭರೂಚ್ನಲ್ಲಿ ಆಯೋಜನೆ ಮಾಡಲಾಗಿದ್ದ ಉತ್ಕರ್ಷ್ ಸಮಾರೋಹ್ ಕಾರ್ಯಕ್ರಮ ಉದ್ದೇಶಿಸಿ ವಿಡಿಯೋ ಕಾನ್ಫರೆನ್ಸ್ ಮೂಲಕ ನರೇಂದ್ರ ಮೋದಿ ಮಾತನಾಡಿದರು. ಈ ವೇಳೆ, ಫಲಾನುಭವಿಯೊಬ್ಬರ ಪುತ್ರಿ ಜೊತೆ ಮಾತನಾಡುತ್ತಿದ್ದ ವೇಳೆ ನಮೋ ಭಾವುಕರಾದ ಘಟನೆ ನಡೆಯಿತು.
ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದ ವೇಳೆ ಪ್ರಧಾನಿ, ಫಲಾನುಭವಿ ಜೊತೆ ಸಂವಾದ ನಡೆಸಿದರು. 'ನಿಮ್ಮ ಹೆಣ್ಣು ಮಕ್ಕಳಿಗೆ ಶಿಕ್ಷಣ ನೀಡುತ್ತೀರಾ? ಎಂದು ಪ್ರಶ್ನೆ ಮಾಡಿದರು. ಇದಕ್ಕೆ ಉತ್ತರಿಸಿದ ವ್ಯಕ್ತಿ, ಮೂವರು ಹೆಣ್ಣು ಮಕ್ಕಳಲ್ಲಿ ಒಬ್ಬಳು ವೈದ್ಯೆಯಾಗಲು ಬಯಸಿದ್ದಾಳೆ ಎಂದು ತಿಳಿಸಿದ್ದರು.
ಈ ವೇಳೆ, ವೈದ್ಯಕೀಯ ವೃತ್ತಿ ಆಯ್ಕೆ ಮಾಡಿಕೊಳ್ಳಲು ಕಾರಣ ಏನು ಎಂದು ಪ್ರಧಾನಿ ಮೋದಿ ಕೇಳಿದಾಗ, 'ನನ್ನ ತಂದೆ ದೃಷ್ಟಿ ಹೀನತೆಯಿಂದ ಬಳಲುತ್ತಿರುವ ಸಮಸ್ಯೆ ಹೋಗಲಾಡಿಸಲು ನಾನು ವೈದ್ಯನಾಗಲು ಬಯಸುತ್ತೇನೆ' ಎಂದರು. ಬಾಲಕಿಯ ಮಾತು ಕೇಳಿ ನಮೋ ಭಾವೋದ್ವೇಗಕ್ಕೊಳಗಾದರು. ಈ ವೇಳೆ ಕೆಲಹೊತ್ತು ಮೌನಕ್ಕೆ ಶರಣಾದ ಘಟನೆ ಸಹ ನಡೆಯಿತು. ಇದರ ಬೆನ್ನಲ್ಲೇ ಬಾಲಕಿಯ ನಿರ್ಧಾರಕ್ಕೆ ಶ್ಲಾಘನೆ ವ್ಯಕ್ತಪಡಿಸಿದರು.