ನವದೆಹಲಿ:ಇಂಗ್ಲೆಂಡ್‌ನಲ್ಲಿ ನಡೆಯುತ್ತಿರುವ ಜಿ-7 ಶೃಂಗಸಭೆಯಲ್ಲಿ ವರ್ಚುವಲ್ ಮೂಲಕ ಭಾಗವಹಿಸಿದ್ದ ಪ್ರಧಾನಿ ನರೇಂದ್ರ ಮೋದಿ ತಮ್ಮ ಭಾಷಣದಲ್ಲಿ 'ಒಂದು ಭೂಮಿ, ಒಂದು ಆರೋಗ್ಯ' ಮಂತ್ರ ಜಪಿಸಿದ್ದಾರೆ. ‘ಬಿಲ್ಡಿಂಗ್ ಬ್ಯಾಕ್ ಸ್ಟ್ರಾಂಗ್-ಹೆಲ್ತ್’ ಎಂಬ ಶೀರ್ಷಿಕೆಯಡಿ ನಡೆದ ಸಭೆಯಲ್ಲಿ ಭವಿಷ್ಯದ ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟಲು ಜಾಗತಿಕ ಒಗ್ಗಟ್ಟು, ನಾಯಕತ್ವ ಮತ್ತು ಸಮನ್ವಯಕ್ಕೆ ಮೋದಿ ಕರೆ ನೀಡಿದರು.
ಇಂಗ್ಲೆಂಡ್ ಪ್ರಧಾನಿ ಬೋರಿಸ್ ಜಾನ್ಸನ್ ನೇತೃತ್ವದಲ್ಲಿ ಜಿ-7 ಶೃಂಗಸಭೆ ನಡೆಯುತ್ತಿದ್ದು, ಭಾರತ, ಆಸ್ಟ್ರೇಲಿಯಾ, ಕೊರಿಯಾ ಗಣತಂತ್ರ ಮತ್ತು ದಕ್ಷಿಣ ಆಫ್ರಿಕಾಗಳನ್ನು ಅತಿಥಿ ರಾಷ್ಟ್ರಗಳನ್ನಾಗಿ ಆಹ್ವಾನಿಸಲಾಗಿದೆ. ಪ್ರಧಾನಿ ಸಂದೇಶಕ್ಕೆ ಜರ್ಮನ್ ಚಾನ್ಸೆಲರ್ ಏಂಜೆಲಾ ಮರ್ಕೆಲ್ ಅವರಿಂದ ತಕ್ಷಣದ ಬೆಂಬಲ ದೊರೆತಿದೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ.
ಭವಿಷ್ಯದ ಸಾಂಕ್ರಾಮಿಕ ರೋಗಗಳ ಸವಾಲನ್ನು ಎದುರಿಸಲು ದೇಶದಲ್ಲಿನ ಪ್ರಜಾಪ್ರಭುತ್ವ ಮತ್ತು ಪಾರದರ್ಶಕ ಸಮಾಜಗಳ ವಿಶೇಷ ಜವಾಬ್ದಾರಿಯನ್ನು ಒತ್ತಿ ಹೇಳಿದರು. ಕೋವಿಡ್ ಸಂಬಂಧಿತ ತಂತ್ರಜ್ಞಾನಗಳಿಗೆ ಪೇಟೆಂಟ್ ವಿನಾಯಿತಿ ನೀಡುವಂತೆ ವಿಶ್ವ ವ್ಯಾಪಾರ ಸಂಸ್ಥೆಗೆ (WTO) ಭಾರತ, ದಕ್ಷಿಣ ಆಫ್ರಿಕಾ ಮಾಡಿರುವ ಪ್ರಸ್ತಾಪಕ್ಕೆ ಜಿ -7 ಬೆಂಬಲ ನೀಡಬೇಕೆಂದ ಪ್ರಧಾನಿ, ಜಾಗತಿಕವಾಗಿ ಆರೋಗ್ಯ ಸುಧಾರಿಸಲು ಸಮಗ್ರ ಪ್ರಯತ್ನಗಳಿಗೆ ಭಾರತದ ಸಹಕಾರ ಸದಾ ಇರಲಿದೆ ಎಂದು ಭರವಸೆ ನೀಡಿದರು.
ಅಲ್ಲದೆ ಭಾರತದಲ್ಲಿ ಕೋವಿಡ್ 2ನೇ ಅಲೆ ಸಂದರ್ಭದಲ್ಲಿ ಜಿ 7 ಮತ್ತು ಇತರ ರಾಷ್ಟ್ರಗಳು ನೀಡಿದ ಬೆಂಬಲಕ್ಕೆ ಮೋದಿ ಮೆಚ್ಚುಗೆ ವ್ಯಕ್ತಪಡಿಸಿದರು. ಇಂದೂ (ಭಾನುವಾರ) ಕೂಡ ಪಿಎಂ ಜಿ-7 ಶೃಂಗಸಭೆಯ ಎರಡು ಅಧಿವೇಶನಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.
ಇದನ್ನೂ ಓದಿ:ಕೋವಿಡ್ ಹರಡಿದ ಚೀನಾ ಬಗ್ಗೆ ಕಾಂಗ್ರೆಸ್ ಚಕಾರವೆತ್ತಿಲ್ಲವೇಕೆ?: ಸಚಿವ ಸುಧಾಕರ್ ಪ್ರಶ್ನೆ