ತಿರುವನಂತಪುರಂ (ಕೇರಳ):ಎರಡು ದಿನಗಳ ಕೇರಳ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ರಾಜ್ಯದ ಮೊದಲ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಹಸಿರು ನಿಶಾನೆ ತೋರಿದರು. ರಾಜಧಾನಿ ತಿರುವನಂತಪುರಂ ಮತ್ತು ಕಾಸರಗೋಡು ನಡುವೆ ಈ ರೈಲು ಸಂಚರಿಸುತ್ತದೆ.
ತಿರುವನಂತಪುರಂ ಸೆಂಟ್ರಲ್ ರೈಲ್ವೆ ನಿಲ್ದಾಣದಲ್ಲಿ ಬೆಳಗ್ಗೆ 11.10ಕ್ಕೆ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಪ್ರಧಾನಿ ಚಾಲನೆ ನೀಡಿದರು. ಇದೇ ವೇಳೆ ರೈಲಿನ ಕೋಚ್‌ವೊಂದಲ್ಲಿ ಶಾಲಾ ಮಕ್ಕಳೊಂದಿಗೆ ಸಂವಾದ ನಡೆಸಿದರು. ಕೇರಳ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್, ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮತ್ತು ಕಾಂಗ್ರೆಸ್ ಸಂಸದ ಶಶಿ ತರೂರ್ ಉಪಸ್ಥಿತರಿದ್ದರು.
ಎಕ್ಸ್‌ಪ್ರೆಸ್ ರೈಲಿಗೆ ಚಾಲನೆ ನೀಡಿದ ಬಳಿಕ ಕೇರಳ ಸೆಂಟ್ರಲ್ ಸ್ಟೇಡಿಯಂದಲ್ಲಿ ಕೊಚ್ಚಿ ವಾಟರ್ ಮೆಟ್ರೋ ಸೇವೆಗೆ ಚಾಲನೆ ಕೊಟ್ಟರು. ಅಲ್ಲದೇ, ದೇಶದ ಮೊದಲ ಡಿಜಿಟಲ್ ಸೈನ್ಸ್ ಪಾರ್ಕ್ ಸೇರಿ ವಿವಿಧ ಯೋಜನೆಗಳ ಶಂಕುಸ್ಥಾಪನೆ ನೆರವೇರಿಸಿದರು. ಇದಕ್ಕೂ ಮುನ್ನ ಕೊಚ್ಚಿಯಿಂದ ಮೋದಿ ತಿರುವನಂತಪುರಂ ವಿಮಾನ ನಿಲ್ದಾಣಕ್ಕೆ ಬಂದಿಳಿದರು. ಈ ಸಂದರ್ಭದಲ್ಲಿ ಅವರನ್ನು ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರು ಭವ್ಯ ಸ್ವಾಗತ ಕೋರಿದರು. ವಿಮಾನ ನಿಲ್ದಾಣದಿಂದ ರೈಲ್ವೆ ನಿಲ್ದಾಣದವರೆಗೆ ರೋಡ್ ಶೋ ಮೂಲಕ ಪ್ರಧಾನಿ ಮೋದಿ ಆಗಮಿಸಿದರು. ಕಾರಿನ ಫುಟ್‌ಬೋರ್ಡ್‌ನಲ್ಲಿ ನಿಂತುಕೊಂಡು ಅವರು ರಸ್ತೆ ಬದಿಯಲ್ಲಿದ್ದ ನೆರೆದಿದ್ದ ಜನರತ್ತ ಕೈಬೀಸಿದರು.
ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನ ಬಗ್ಗೆ... ಕೇರಳದ ಮೊದಲ ವಂದೇ ಭಾರತ್ ರೈಲು ಏಪ್ರಿಲ್ 28ರಿಂದ ಕಾರ್ಯನಿರ್ವಹಿಸಲಿದೆ. ಈ ರೈಲಿನಲ್ಲಿ ಚೇರ್ ಕಾರ್ ಟಿಕೆಟ್ ದರ ತಿರುವನಂತಪುರಂನಿಂದ ಕಾಸರಗೋಡಿಗೆ 1,590 ರೂ. ಮತ್ತು ಎಕ್ಸಿಕ್ಯೂಟಿವ್ ಚೇರ್ ಕಾರ್ ಸೀಟಿಂಗ್ ಟಿಕೆಟ್ ದರ 2,880 ರೂ. ಇದೆ. ತಿರುವನಂತಪುರಂ ಸೆಂಟ್ರಲ್ ರೈಲು ನಿಲ್ದಾಣದಿಂದ ಪ್ರತಿದಿನ ಬೆಳಗ್ಗೆ 5.20 ಕ್ಕೆ ಹೊರಡಲಿದೆ. ಎಂಟು ಗಂಟೆ ಐದು ನಿಮಿಷಗಳಲ್ಲಿ ಕಾಸರಗೋಡಿಗೆ ಸಂಚರಿಸುತ್ತದೆ.
ತಿರುವನಂತಪುರಂ ಆರಂಭವಾಗುವ ರೈಲು ಬೆಳಗ್ಗೆ 6.07ಕ್ಕೆ ಕೊಲ್ಲಂಗೆ ತಲುಪುತ್ತದೆ. ಕೊಟ್ಟಾಯಂ - 7.25, ಎರ್ನಾಕುಲಂ ಟೌನ್ - 8.17, ತ್ರಿಶೂರ್ - 9.22, ಶೋರ್ನೂರು - 10.02, ಕೋಯಿಕ್ಕೋಡ್ - 11.03, ಕಣ್ಣೂರು - ಮಧ್ಯಾಹ್ನ 12.03 ಮತ್ತು ಕಾಸರಗೋಡಿಗೆ ಮಧ್ಯಾಹ್ನ 1.25ಕ್ಕೆ ತಲುಪುತ್ತದೆ. ಅಲ್ಲಿಂದ ಮಧ್ಯಾಹ್ನ 2.30ಕ್ಕೆ ವಾಪಸ್ ಪ್ರಯಾಣ ಆರಂಭವಾಗಲಿದೆ.
ಕಾಸರಗೋಡಿಗೆ ಕಣ್ಣೂರಿಗೆ ಮಧ್ಯಾಹ್ನ 3.28, ಕೋಝಿಕ್ಕೋಡ್ - 4.28, ಶೋರ್ನೂರು - 5.28, ತ್ರಿಶೂರ್ - 6.03, ಎರ್ನಾಕುಲಂ - 7.05, ಕೊಟ್ಟಾಯಂ - 8 ಗಂಟೆ, ಕೊಲ್ಲಂ - 9.18 ಮತ್ತು ತಿರುವನಂತಪುರಂಕ್ಕೆ ರಾತ್ರಿ 10.35ಕ್ಕೆ ರೈಲು ತಲುಪುತ್ತದೆ. ವಂದೇ ಭಾರತ್ ರೈಲಿನ ಗರಿಷ್ಠ ವೇಗ ಗಂಟೆಗೆ 180 ಕಿ.ಮೀ. ಇದೆ. ಆದರೆ, ಕೇರಳ ರೈಲು ಮಾರ್ಗದಲ್ಲಿ ಸುಮಾರು 600 ಕರ್ವ್‌ಗಳಿವೆ. ಆದ್ದರಿಂದ ತಿರುವನಂತಪುರದಿಂದ ಕಣ್ಣೂರಿಗೆ ಪ್ರಾರಂಭವಾಗುವ ಮೊದಲ ಹಂತದಲ್ಲಿ ಗರಿಷ್ಠ ವೇಗ 100 ರಿಂದ 110 ಕಿ.ಮೀ. ಇರಲಿದೆ ಅಂದಾಜಿಸಲಾಗಿದೆ.
ಇದನ್ನೂ ಓದಿ:ಯುಪಿ ಸಿಎಂ ಯೋಗಿ ಆದಿತ್ಯನಾಥಗೆ ಬೆದರಿಕೆ ಕರೆ, ಅನಾಮಿಕನ ವಿರುದ್ಧ ಪ್ರಕರಣ ದಾಖಲು