ಗಾಂಧಿನಗರ (ಗುಜರಾತ್):ಗಾಂಧಿನಗರ-ಮುಂಬೈ ಸೆಂಟ್ರಲ್ 'ವಂದೇ ಭಾರತ್ ಎಕ್ಸ್‌ಪ್ರೆಸ್' ರೈಲಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಗಾಂಧಿನಗರದಲ್ಲಿ ಚಾಲನೆ ನೀಡಿದರು. ಬಳಿಕ ರೈಲ್ವೆ ಸಿಬ್ಬಂದಿ, ಮಹಿಳಾ ಉದ್ಯಮಿಗಳು ಮತ್ತು ಯುವಕರೊಂದಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಗಾಂಧಿನಗರದಿಂದ ಅಹಮದಾಬಾದ್‌ಗೆ ರೈಲಿನಲ್ಲಿ ಪ್ರಯಾಣಿಸಿದರು ಎಂದು ಪಿಎಂಒ ಹೇಳಿದೆ.
ಇದು ದೇಶದ ಮೂರನೇ ವಂದೇ ಭಾರತ್ ರೈಲು. ಈ ರೈಲು ಗಾಂಧಿನಗರ ಮತ್ತು ಮುಂಬೈ ನಡುವೆ ಸಂಚರಿಸಲಿದ್ದು, ಗುಜರಾತ್ ಮತ್ತು ಮಹಾರಾಷ್ಟ್ರ ರಾಜ್ಯಗಳ ರಾಜಧಾನಿಗಳನ್ನು ಸಂಪರ್ಕಿಸುತ್ತದೆ. ಭಾನುವಾರ ಹೊರತುಪಡಿಸಿ ವಾರದಲ್ಲಿ 6 ದಿನ ರೈಲು ಸಂಚರಿಸಲಿದೆ.
ಸಂಚಾರ ಸಮಯ:ವಂದೇ ಭಾರತ್ ರೈಲು 20901, ಮುಂಬೈ ಸೆಂಟ್ರಲ್‌ನಿಂದ ಬೆಳಗ್ಗೆ 6.10 ಕ್ಕೆ ಹೊರಟು ಮಧ್ಯಾಹ್ನ 12.30 ಕ್ಕೆ ಗಾಂಧಿನಗರ ತಲುಪಲಿದೆ. ಮುಂಬೈಗೆ ಹಿಂತಿರುಗುವ ರೈಲು- 20902 ಗಾಂಧಿನಗರ ರಾಜಧಾನಿ ನಿಲ್ದಾಣದಿಂದ ಮಧ್ಯಾಹ್ನ 2.05 ಕ್ಕೆ ಹೊರಟು ರಾತ್ರಿ 8.35 ಕ್ಕೆ ಮುಂಬೈ ಸೆಂಟ್ರಲ್ ತಲುಪಲಿದೆ. 16 ಕೋಚ್‌ಗಳನ್ನು ಹೊಂದಿರುವ ಈ ರೈಲು 1,128 ಪ್ರಯಾಣಿಕರ ಆಸನ ಸಾಮರ್ಥ್ಯವನ್ನು ಹೊಂದಿದೆ ಮತ್ತು ಗಾಂಧಿನಗರ ರಾಜಧಾನಿ ನಿಲ್ದಾಣವನ್ನು ತಲುಪುವ ಮೊದಲು ಸೂರತ್, ವಡೋದರಾ ಮತ್ತು ಅಹಮದಾಬಾದ್ ನಿಲ್ದಾಣಗಳಲ್ಲಿ ನಿಲ್ಲುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸುರಕ್ಷಿತ ಮತ್ತು ಹೆಚ್ಚು ಆರಾಮದಾಯಕ:ಹೊಸ ವಂದೇ ಭಾರತ್ ರೈಲುಗಳು ಒರಗುವ ಆಸನಗಳು, ಸ್ವಯಂಚಾಲಿತ ಅಗ್ನಿ ಸಂವೇದಕಗಳು, ಸಿಸಿಟಿವಿ ಕ್ಯಾಮರಾಗಳು, ವೈಫೈ ಸೌಲಭ್ಯದೊಂದಿಗೆ, ಮೂರು ಗಂಟೆಗಳ ಬ್ಯಾಟರಿ ಬ್ಯಾಕಪ್ ಮತ್ತು ಜಿಪಿಎಸ್ ವ್ಯವಸ್ಥೆಗಳು ಸೇರಿದಂತೆ ಸುಧಾರಿತ ವೈಶಿಷ್ಟ್ಯಗಳನ್ನು ಹೊಂದಿದ್ದು, ಪ್ರಯಾಣವನ್ನು ಸುರಕ್ಷಿತ ಮತ್ತು ಹೆಚ್ಚು ಆರಾಮದಾಯಕವಾಗಿಸುತ್ತದೆ. ಚೆನ್ನೈನಲ್ಲಿರುವ ಇಂಟಿಗ್ರಲ್ ಕೋಚ್ ಫ್ಯಾಕ್ಟರಿ (ICF) ಆಗಸ್ಟ್ 2023 ರ ವೇಳೆಗೆ 75 ವಂದೇ ಭಾರತ್ ರೈಲುಗಳನ್ನು ತಯಾರಿಸುವ ಗುರಿ ಹೊಂದಿದೆ.