ಗುವಾಹಟಿ (ಅಸ್ಸಾಂ) : ಪ್ರಧಾನಿ ನರೇಂದ್ರ ಮೋದಿ ಇಂದು ವಿಡಿಯೋ ಕಾನ್ಫರೆನ್ಸ್ ಮೂಲಕ ಅಸ್ಸಾಂನ ಮೊದಲ 'ವಂದೇ ಭಾರತ್ ಎಕ್ಸ್‌ಪ್ರೆಸ್' ರೈಲಿಗೆ ಚಾಲನೆ ಕೊಟ್ಟರು. ಈ ಮೂಲಕ ಈಶಾನ್ಯ ಭಾರತವನ್ನು ಸಂಪರ್ಕಿಸುವ ಮೊದಲ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಇದಾಗಲಿದ್ದು, ಗುವಾಹಟಿ ರೈಲು ನಿಲ್ದಾಣದಿಂದ ನ್ಯೂ ಜಲ್ಪೈಗುರಿಗೆ ಪ್ರಯಾಣಿಸಿದೆ.
ವಂದೇ ಭಾರತ್ ಎಕ್ಸ್‌ಪ್ರೆಸ್‌ಗೆ ಚಾಲನೆ ನೀಡಿ ಮಾತನಾಡಿದ ಪ್ರಧಾನಿ ಮೋದಿ, ಹಿಂದಿನ ಸರ್ಕಾರಗಳನ್ನು ಟೀಕಿಸಿದರು. "ಹಿಂದಿನ ಸರ್ಕಾರದಿಂದ ಈಶಾನ್ಯ ಜನರು ದೀರ್ಘಕಾಲ ಅಭಿವೃದ್ಧಿಯಿಂದ ದೂರವಿದ್ದರು" ಎಂದರು. ಮುಂದುವರೆದು, ವಂದೇ ಭಾರತ್ ಎಕ್ಸ್‌ಪ್ರೆಸ್ ಪ್ರಮುಖ ಸ್ಥಳಗಳಾದ ಕಾಮಾಖ್ಯ ದೇವಾಲಯ, ಕಾಜಿರಂಗ ಅಭಯಾರಣ್ಯ, ಅಸ್ಸಾಂನ ಮಾನಸ್ ಟೈಗರ್ ರಿಸರ್ವ್, ಮೇಘಾಲಯದ ಶಿಲ್ಲಾಂಗ್ ಮತ್ತು ಚಿರಾಪುಂಜಿ ಮತ್ತು ಅರುಣಾಚಲ ಪ್ರದೇಶದ ತವಾಂಗ್‌ಗಳನ್ನು ಸಂಪರ್ಕಿಸುವ ಮೂಲಕ ವ್ಯಾಪಾರ ಮತ್ತು ಪ್ರವಾಸೋದ್ಯಮವನ್ನು ಉತ್ತೇಜಿಸುತ್ತದೆ.
2014 ರ ಮೊದಲು ಈಶಾನ್ಯಕ್ಕೆ ರೈಲ್ವೆಯ ಬಜೆಟ್ ₹ 2,500 ಕೋಟಿ ಆಗಿತ್ತು. ಈಗ ಅದು ₹10,000 ಕೋಟಿಗೂ ಹೆಚ್ಚು ಅಂದರೆ ನಾಲ್ಕು ಪಟ್ಟು ಬೆಳವಣಿಗೆಯಾಗಿದೆ. ಈಶಾನ್ಯದ ಎಲ್ಲ ಭಾಗಗಳನ್ನು ಶೀಘ್ರದಲ್ಲೇ ಬ್ರಾಡ್-ಗೇಜ್ ನೆಟ್ವರ್ಕ್ ಮೂಲಕ ಸಂಪರ್ಕಿಸಲಾಗುವುದು. ಇದಕ್ಕಾಗಿ ₹1 ಲಕ್ಷ ಕೋಟಿ ಖರ್ಚು ಮಾಡಲಾಗುತ್ತಿದೆ. ಈಶಾನ್ಯದ ಸಂಪರ್ಕಕ್ಕೆ ಸಂಬಂಧಿಸಿದಂತೆ ಮೂರು ಕಾಮಗಾರಿಗಳು ನಡೆಯುತ್ತಿವೆ ಎಂದರು.
"ಇಂದು ಅಸ್ಸಾಂ ಸೇರಿದಂತೆ ಇಡೀ ಈಶಾನ್ಯದ ರೈಲು ಸಂಪರ್ಕಕ್ಕೆ ಮಹತ್ವದ ದಿನವಾಗಿದೆ. ವಂದೇ ಭಾರತ್ ಎಕ್ಸ್‌ಪ್ರೆಸ್ ಇಲ್ಲಿ ವಾಸಿಸುವ ಜನರ ಜೀವನವನ್ನು ಸುಲಭಗೊಳಿಸುತ್ತದೆ ಮತ್ತು ಇದು ರಾಜ್ಯದ ಪ್ರವಾಸೋದ್ಯಮ ಕ್ಷೇತ್ರಕ್ಕೆ ಉತ್ತೇಜನ ನೀಡುತ್ತದೆ" ಎಂದು ನರೇಂದ್ರ ಮೋದಿ ಹೇಳಿದರು.