ನವದೆಹಲಿ:77 ನೇ ವಸಂತಕ್ಕೆ ಕಾಲಿಟ್ಟ ಕಾಂಗ್ರೆಸ್ ಪಕ್ಷದ ಮಾಜಿ ಅಧ್ಯಕ್ಷೆ, ಹಿರಿಯ ನಾಯಕಿ ಸೋನಿಯಾ ಗಾಂಧಿ ಅವರಿಗೆ ಪ್ರಧಾನಿ ಮೋದಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಸೇರಿದಂತೆ ಇಂಡಿಯಾ ಮೈತ್ರಿಕೂಟದ ವಿವಿಧ ನಾಯಕರು ಶುಭ ಕೋರಿದರು. ದೀರ್ಘ ಮತ್ತು ಆರೋಗ್ಯಕರ ಜೀವನವನ್ನು ದೇವರು ಕರುಣಿಸಲು ಎಂದು ಹಾರೈಸಿದರು.
ಎಕ್ಸ್ ಖಾತೆಯಲ್ಲಿ ಸೋನಿಯಾ ಗಾಂಧಿ ಅವರಿಗೆ ಜನ್ಮದಿನದ ಶುಭಾಶಯ ಕೋರಿರುವ ಪ್ರಧಾನಿ ಮೋದಿ ಅವರು, ಸೋನಿಯಾ ಗಾಂಧಿ ಅವರಿಗೆ ಜನ್ಮದಿನದ ಶುಭಾಶಯಗಳು, ದೇವರು ಅವರಿಗೆ ದೀರ್ಘ ಮತ್ತು ಆರೋಗ್ಯಕರ ಜೀವನವನ್ನು ಆಶೀರ್ವದಿಸಲಿ ಎಂದು ಶುಭ ಹಾರೈಸಿದ್ದಾರೆ.
ಅಂಚಿನಲ್ಲಿರುವ ಜನರ ಹಕ್ಕುಗಳ ಪರವಾಗಿ ವಕಾಲತ್ತು ವಹಿಸುವ, ಧೈರ್ಯ, ನಿಸ್ವಾರ್ಥ, ತ್ಯಾಗದ ಸಂಕೇತವಾಗಿರುವ ಪಕ್ಷದ ಮಾಜಿ ಅಧ್ಯಕ್ಷರು, ಕಾಂಗ್ರೆಸ್ ಸಂಸದೀಯ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಶುಭಾಶಯಗಳು. ದೀರ್ಘ ಮತ್ತು ಆರೋಗ್ಯಕರ ಜೀವನ ನಿಮ್ಮದಾಗಲಿ ಎಂದು ಹಾರೈಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಎಕ್ಸ್ನಲ್ಲಿ ಬರೆದುಕೊಂಡಿದ್ದಾರೆ.
ಜೊತೆಗ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆಸಿ ವೇಣುಗೋಪಾಲ್ ಅವರು ಸೋನಿಯಾ ಗಾಂಧಿಗೆ ಜನ್ಮದಿನದಂದು ಶುಭ ಹಾರೈಸಿದ್ದು, ಸಮಾಜದ ಬಡ ಮತ್ತು ಅಂಚಿನಲ್ಲಿರುವ ವರ್ಗಗಳ ಉನ್ನತಿಗಾಗಿ ಶ್ರಮಿಸುತ್ತಿರುವ ನಾಯಕಿ. ನಿಮ್ಮ ಸಾರ್ವಜನಿಕ ಸೇವಾ ಬದ್ಧತೆ, ಸಮಾಜದ ಕಟ್ಟಕಡೆಯ ವ್ಯಕ್ತಿಯೂ ಅಭಿವೃದ್ಧಿ ಹೊಂದುವ ಬಯಕೆಯು ಕೋಟ್ಯಂತರ ಹೃದಯಗಳನ್ನು ಗೆದ್ದಿದೆ ಎಂದು ಬಣ್ಣಿಸಿದರು.
ಅವರ ರಾಜಕೀಯ ಜೀವನದಲ್ಲಿ ನಮಗೆಲ್ಲರಿಗೂ ಸ್ಫೂರ್ತಿ. ಅವರು ಕಾಂಗ್ರೆಸ್ ಅನ್ನು ಸವಾಲಿನ ಅವಧಿಯಲ್ಲಿ ಅತ್ಯಂತ ಸಮಚಿತ್ತದಿಂದ ಮುನ್ನಡೆಸಿದರು. ಈ ಹಿಂದಿನ ಯುಪಿಎ ಸರ್ಕಾರದ ರೂವಾರಿಯಾಗಿದ್ದರು. ಎಲ್ಲರ ಅಭಿವೃದ್ಧಿ ಬಯಸುವ ವ್ಯಕ್ತಿತ್ವ ಅವರದ್ದು ಎಂದು ಹೊಗಳಿಕೆಯ ಮಾತನ್ನಾಡಿದ್ದಾರೆ.
ಇಂಡಿಯಾ ಕೂಟದಿಂದ ವಿಶ್:ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ವಿಪಕ್ಷಗಳೆಲ್ಲಾ ಸೇರಿಕೊಂಡು ರಚಿಸಿಕೊಂಡ I.N.D.IA. ಕೂಟದ ನಾಯಕರು ಕೂಡ ಸೋನಿಯಾ ಅವರಿಗೆ ಜನ್ಮದಿನದ ವಿಶ್ ಮಾಡಿದ್ದಾರೆ. ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಅವರು ಹಿರಿಯ ಕಾಂಗ್ರೆಸ್ ನಾಯಕಿಗೆ ಶುಭ ಹಾರೈಸಿದ್ದಾರೆ. ಕಾಂಗ್ರೆಸ್ ಸಂಸದೀಯ ಪಕ್ಷದ ಅಧ್ಯಕ್ಷೆ ಮೇಡಂ ಸೋನಿಯಾ ಗಾಂಧಿ ಅವರಿಗೆ ಶುಭಾಶಯಗಳು. ನಿಮ್ಮ ಸಮರ್ಪಿತ ಸಾರ್ವಜನಿಕ ಜೀವನವು ಮಾದರಿಯಾಗಿದೆ. ಉತ್ತಮ ಆರೋಗ್ಯದಿಂದ ತುಂಬಿದ ದೀರ್ಘಾಯುಷ್ಯ ಬಯಸುವೆ ಎಂದು ಸ್ಟಾಲಿನ್ ಹೇಳಿದರು.
ಪ್ರತಿಪಕ್ಷಗಳ ಮೈತ್ರಿಯನ್ನು ಬಲಪಡಿಸಲು ಸೋನಿಯಾ ಅವರ ಕೊಡುಗೆ ಮಹತ್ವದ್ದಾಗಿದೆ. ಭಾರತವನ್ನು ನಿರಂಕುಶ ಶಕ್ತಿಗಳಿಂದ ರಕ್ಷಿಸುವ ನಮ್ಮ ಒಗ್ಗಟ್ಟಿನ ಪ್ರಯತ್ನದಲ್ಲಿ ಅವರ ದೂರದೃಷ್ಟಿ ಮತ್ತು ಅನುಭವದ ಸಂಪತ್ತು ಮಾರ್ಗದರ್ಶಿ ದೀಪವಾಗಿ ಮುಂದುವರಿಯಲಿ ಎಂದು ಹೇಳಿದರು.
ಇತ್ತೀಚಿಗೆ ಮುಗಿದ ತೆಲಂಗಾಣ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸಿ, ಮುಖ್ಯಮಂತ್ರಿಯಾಗಿ ರೇವಂತ್ ರೆಡ್ಡಿ ಅವರ ಪ್ರಮಾಣವಚನ ಸಮಾರಂಭದಲ್ಲಿ ಸೋನಿಯಾ ಅವರು ಹಾಜರಿದ್ದರು. ಸಂಸತ್ತಿನ ಚಳಿಗಾಲದ ಅಧಿವೇಶನದ ಕಾರ್ಯತಂತ್ರವನ್ನು ರೂಪಿಸುವ ಭಾಗವಾಗಿ ನಡೆದ ಕಾಂಗ್ರೆಸ್ ಸಂಸದೀಯ ಸಭೆಯಲ್ಲೂ ಅವರು ಭಾಗವಹಿಸಿದ್ದರು.
ಇದನ್ನೂ ಓದಿ:'ಸೋನಿಯಾ ಗಾಂಧಿ ನನ್ನನ್ನು ಪ್ರಧಾನಿ ಮಾಡಲ್ಲ': ದಿ.ಪ್ರಣಬ್ ಮುಖರ್ಜಿ ಮಾತು ನೆನಪಿಸಿಕೊಂಡ ಪುತ್ರಿ ಶರ್ಮಿಷ್ಠಾ