ನವದೆಹಲಿ:ಈ ವರ್ಷದ ಸಂಸತ್ನ ಮುಂಗಾರು ಅಧಿವೇಶನದಲ್ಲಿ ಸರ್ಕಾರದ ಪ್ರಮುಖ ಮಸೂದೆಗಳ ಅಂಗೀಕಾರದ ವೇಳೆ ಪಕ್ಷದ ಸಂಸದರು ಗೈರು ಹಾಜರಾದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸೋಮವಾರ ರಾಜ್ಯಸಭೆಯಲ್ಲಿ ಕೇಂದ್ರ ಸರ್ಕಾರ ಬುಡಕಟ್ಟುಗಳ ಸುಧಾರಣೆ ವಿಧೇಯಕವನ್ನು ಸೆಲೆಕ್ಟ್ ಕಮಿಟಿಗೆ ಕಳುಹಿಸುವಂತೆ ಪಟ್ಟು ಹಿಡಿದಿದ್ದವು. ಅಷ್ಟೇ ಅಲ್ಲ ಧ್ವನಿಮತದ ಬದಲಿಗೆ ಮತ ವಿಭಜನೆಗೆ ಪಟ್ಟು ಹಿಡಿದಿದ್ದವು. ಈ ಹಿನ್ನೆಲೆಯಲ್ಲಿ ಪಕ್ಷದ ಸಂಸದರಲ್ಲಿ ಶಿಸ್ತುಬದ್ಧತೆಯ ಅಗತ್ಯತೆಯನ್ನು ಪ್ರಧಾನಿ ಮೋದಿ ಒತ್ತಿ ಹೇಳಿದ್ದರು.
ಅಷ್ಟೇ ಅಲ್ಲ ಇಂತಹ ಘಟನೆಗಳು ಮರುಕಳುಸದಂತೆಯೂ ಅವರು ಸಂಸದರಿಗೆ ಎಚ್ಚರಿಸಿದ್ದರು. ಇದೇ ವೇಳೆ ಸೋಮವಾರ ರಾಜ್ಯಸಭೆಗೆ ಕಲಾಪಕ್ಕೆ ಗೈರು ಹಾಜರಾಗಿದ್ದ ಸಂಸದರ ಹೆಸರನ್ನು ಪ್ರಧಾನಿ ಮೋದಿ ಕೇಳಿದ್ದಾರೆ ಎಂದು ತಿಳಿದು ಬಂದಿದೆ.
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸೋಮವಾರ ರಾಜ್ಯಸಭೆಯಲ್ಲಿ ಬುಡಕಟ್ಟುಗಳ ಸುಧಾರಣಾ ವಿಧೇಯಕವನ್ನು ಮಂಡಿಸಿದ್ದರು. ಈ ವೇಳೆ, ಪಕ್ಷದ ಬಹುತೇಕ ಸಂಸದರು ಗೈರು ಹಾಜರಾಗಿದ್ದರು. ಇದನ್ನು ಗಮನಿಸಿದ ಪ್ರತಿಪಕ್ಷಗಳ ವಿಧೇಯಕವನ್ನು ಮತಕ್ಕೆ ಹಾಕುವಂತೆ ಒತ್ತಾಯಿಸಿದ್ದವು. ಇದು ಪ್ರಧಾನಿಗಳ ಅಸಮಾಧಾನಕ್ಕೆ ಕಾರಣವಾಗಿದೆ ಎಂದು ಸರ್ಕಾರದ ಮೂಲಗಳಿಂದ ತಿಳಿದು ಬಂದಿದೆ.
ಈ ನಡುವೆ ಈ ಬಾರಿಯ ಮುಂಗಾರು ಅಧಿವೇಶನ ಪೆಗಾಸಸ್ ಸ್ಪೈ ವೇರ್ ಹಾಗೂ ಕೇಂದ್ರದ ಮೂರು ಕೃಷಿ ಕಾನೂನುಗಳನ್ನು ವಿರೋಧಿಸಿ ರೈತರ ಪ್ರತಿಭಟನೆ ಹಾಗೂ ಪ್ರತಿಪಕ್ಷಗಳ ಅಸಹಕಾರದ ಹಿನ್ನೆಲೆಯಲ್ಲಿ ಕಲಾಪಗಳು ನಡೆದಿಲ್ಲ. ಪ್ರತಿದಿನ ಪ್ರತಿಪಕ್ಷಗಳ ಗದ್ದಲದಿಂದಾಗಿ ವ್ಯರ್ಥವಾಗಿವೆ.