ನವದೆಹಲಿ:ಕೆಲ ದಿನಗಳ ಹಿಂದೆ ಹತ್ಯೆಗೀಡಾದ ಜಪಾನ್ ಮಾಜಿ ಪ್ರಧಾನಿ ಶಿಂಜೋ ಅಬೆ ಅವರ ಅಂತ್ಯಕ್ರಿಯೆಯಲ್ಲಿ ಭಾಗಿಯಾಗಲು ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಜಪಾನ್ಗೆ ಪ್ರಯಾಣ ಬೆಳೆಸಿದರು.
ನಾಳೆ(ಮಂಗಳವಾರ) ಜಪಾನ್ ಮಾಜಿ ಪ್ರಧಾನಿಗಳ ಅಂತ್ಯಕ್ರಿಯೆ ನಡೆಯಲಿದೆ. ಕೆಲ ದಿನಗಳ ಹಿಂದೆ ಶಿಂಜೋ ಅಬೆ ಅವರು ಯುವಕನೊಬ್ಬನ ಗುಂಡಿನ ದಾಳಿಗೆ ಬಲಿಯಾಗಿದ್ದರು. ಜಪಾನ್ ಪ್ರಧಾನಿ ಫುಮಿಯೊ ಕಿಶಿದಾ ಸರ್ಕಾರಿ ಗೌರವಗಳೊಂದಿಗೆ ಅಂತ್ಯ ಸಂಸ್ಕಾರ ನಡೆಸಲು ನಿರ್ಧರಿಸಿದ್ದರು.
ಇದರಂತೆ ಮಂಗಳವಾರ ಶಿಂಜೋ ಅಬೆ ಅವರಿಗೆ ದೇಶ ಅಂತಿಮ ವಿದಾಯ ಹೇಳಲಿದೆ. ವಿಶ್ವದ 20 ಕ್ಕೂ ಹೆಚ್ಚು ದೇಶಗಳ ನಾಯಕರು ಅಬೆ ಅವರ ಅಂತ್ಯಕ್ರಿಯೆಯಲ್ಲಿ ಭಾಗವಹಿಸಲಿದ್ದಾರೆ. ಹೀಗಾಗಿ ಪ್ರಧಾನಿ ಮೋದಿ ಅವರು ಕೂಡ ಜಪಾನ್ಗೆ ತೆರಳಿದರು.
ಜಪಾನ್ಗೆ ತೆರಳುವ ಮೊದಲು ಪ್ರಧಾನಿ ಮೋದಿ ಅವರು ಟೋಕಿಯೋ ಭೇಟಿ ಬಗ್ಗೆ ಮಾಹಿತಿ ನೀಡಿದ್ದರು. "ನಾಳೆ ನಡೆಯಲಿರುವ ಆತ್ಮೀಯ ಸ್ನೇಹಿತ ಮತ್ತು ಮಾಜಿ ಪ್ರಧಾನಿ ಶಿಂಜೋ ಅಬೆ ಅವರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಜಪಾನ್ಗೆ ಭೇಟಿ ನೀಡಲಿದ್ದೇನೆ. ಎಲ್ಲ ಭಾರತೀಯರ ಪರವಾಗಿ ಸಂತಾಪ ಸೂಚಿಸಲಿದ್ದೇನೆ. ಭಾರತ - ಜಪಾನ್ ಸಂಬಂಧಗಳನ್ನು ಮತ್ತಷ್ಟು ಬಲಪಡಿಸುವ ಕೆಲಸ ಮುಂದುವರಿಸಲಾಗುವುದು" ಎಂದು ಟ್ವೀಟ್ ಮಾಡಿದ್ದರು.