ನವದೆಹಲಿ : ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಇಂದು 10:30 ಕ್ಕೆ ವಿಡಿಯೋ ಕಾನ್ಫರೆನ್ಸ್ ಮೂಲಕ ಉದ್ಯೋಗಕ್ಕೆ ಹೊಸದಾಗಿ ಸೇರ್ಪಡೆಗೊಂಡ ಸುಮಾರು 70,000 ಉದ್ಯೋಗಿಗಳಿಗೆ ನೇಮಕಾತಿ ಪತ್ರಗಳನ್ನು ವಿತರಿಸಿದರು. ಈ ಬಗ್ಗೆ ಪ್ರಧಾನ ಮಂತ್ರಿ ಕಚೇರಿ (ಪಿಎಂಒ) ಅಧಿಕೃತವಾಗಿ ಮೊದಲೇ ಪ್ರಕಟಣೆ ಹೊರಡಿಸಿ ತಿಳಿಸಿತ್ತು. ಸರ್ಕಾರದ ವಿವಿಧ ಇಲಾಖೆಗಳಲ್ಲಿ ಉದ್ಯೋಗ ಪಡೆದ 70 ಸಾವಿರ ಜನರಿಗೆ ಪಿಎಂ ನರೇಂದ್ರ ಮೋದಿ ಅವರು 'ನೇಮಕಾತಿ ಪತ್ರ'ವನ್ನು ವರ್ಚುಯಲ್ ವೇದಿಕೆಯಲ್ಲಿ ವಿತರಿಸಿದ್ದು, ಈ ಸಂದರ್ಭದಲ್ಲಿ ಪ್ರಧಾನಿಯವರು ನೇಮಕಗೊಂಡವರನ್ನು ಉದ್ದೇಶಿಸಿ ಮಾತನಾಡಿದ್ದಾರೆ.
43 ಸ್ಥಳಗಳಲ್ಲಿ ರೋಜ್‌ಗಾರ್ ಮೇಳ: ಅಧಿಕೃತ ಪ್ರಕಟಣೆ ಪ್ರಕಾರ, ಈ ರೋಜ್‌ಗಾರ್ ಮೇಳವು ದೇಶಾದ್ಯಂತ 43 ಸ್ಥಳಗಳಲ್ಲಿ ನಡೆದಿದೆ. ಈ ರೋಜ್‌ಗಾರ್ ಮೇಳವನ್ನು ಬೆಂಬಲಿಸುವ ಕೇಂದ್ರ ಸರ್ಕಾರದ ಇಲಾಖೆಗಳು ಹಾಗೂ ರಾಜ್ಯ ಸರ್ಕಾರಗಳು / ಕೇಂದ್ರಾಡಳಿತ ಪ್ರದೇಶಗಳಲ್ಲಿ ನೇಮಕಾತಿಗಳನ್ನು ನಡೆಸಲಾಯಿತು.
ವಿವಿಧ ಇಲಾಖೆಗಳಡಿ ಉದ್ಯೋಗ: ದೇಶಾದ್ಯಂತ ಹಣಕಾಸು ಸೇವಾ ಇಲಾಖೆ, ಅಂಚೆ ಇಲಾಖೆ, ಶಾಲಾ ಶಿಕ್ಷಣ ಇಲಾಖೆ, ಉನ್ನತ ಶಿಕ್ಷಣ ಇಲಾಖೆ, ರಕ್ಷಣಾ ಸಚಿವಾಲಯ, ಕಂದಾಯ ಇಲಾಖೆ, ಆರೋಗ್ಯ ಸಚಿವಾಲಯ, ಕುಟುಂಬ ಕಲ್ಯಾಣ, ಪರಮಾಣು ಶಕ್ತಿ ಇಲಾಖೆ, ರೈಲ್ವೆ ಸಚಿವಾಲಯ, ಲೆಕ್ಕ ಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆ, ಪರಮಾಣು ಶಕ್ತಿ ಇಲಾಖೆ ಮತ್ತು ಗೃಹ ಸಚಿವಾಲಯ ಸೇರಿದಂತೆ ವಿವಿಧ ಇಲಾಖೆಗಳಡಿ ಉದ್ಯೋಗಿಗಳು ಸೇರ್ಪಡೆಗೊಂಡಿದ್ದಾರೆ. 70,000 ಉದ್ಯೋಗಿಗಳಿಗೆ ಇಂದು ನೇಮಕಾತಿ ಪತ್ರ ಸಿಕ್ಕಿದೆ.
ಪಿಎಂ ಮೋದಿ ಮಾತು... ವರ್ಚುಯಲ್ ವೇದಿಕೆಯಲ್ಲಿ ಮಾತನಾಡಿದ ಪಿಎಂ ಮೋದಿ, ಸರ್ಕಾರದ ವಿವಿಧ ಇಲಾಖೆಗಳಲ್ಲಿ ಸೇವೆ ಸಲ್ಲಿಸುವವರಿಗೆ ಇದು ಅತ್ಯಂತ ನಿರ್ಣಾಯಕ ಅವಧಿ. ಹೊಸದಾಗಿ ನೇಮಕಗೊಂಡವರು ಮುಂದಿನ 25 ವರ್ಷಗಳಲ್ಲಿ ಭಾರತವನ್ನು ಅಭಿವೃದ್ಧಿ ಹೊಂದಿದ ದೇಶವನ್ನಾಗಿ ಮಾಡುವ ಗುರಿಯನ್ನು ಹೊಂದಿರುತ್ತಾರೆ.
ರಾಜಕೀಯ ಭ್ರಷ್ಟಾಚಾರ, ಸರ್ಕಾರದ ಯೋಜನೆಗಳಲ್ಲಿ ವ್ಯತ್ಯಯ ಮತ್ತು ಸಾರ್ವಜನಿಕ ಹಣದ ದುರುಪಯೋಗವು ಈ ಹಿಂದಿನ ಸರ್ಕಾರಗಳಿಗೆ ಸಮಾನಾರ್ಥಕವಾಗಿತ್ತು. ಇಂದು ಭಾರತದಲ್ಲಿ ರಾಜಕೀಯ ಸ್ಥಿರತೆಯನ್ನು ಕಾಣಬಹುದು. ನಮ್ಮ ಸರ್ಕಾರವು ಭಾರತದ ಯುವಜನರ ಭವಿಷ್ಯವನ್ನು ಕಾಪಾಡುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ. ನಿಮ್ಮ ಕನಸು ಮತ್ತು ಆಕಾಂಕ್ಷೆಗಳ ಪೋಷಣೆಗೆ ನಾವು ಕೆಲಸ ಮಾಡುತ್ತಿದ್ದೇವೆ ಎಂದು ಪಿಎಂ ಮೋದಿ ತಿಳಿಸಿದರು.