ನವದೆಹಲಿ:ಡೆನ್ಮಾರ್ಕ್ನ ಕೋಪನ್‌ಹೇಗನ್‌ನಲ್ಲಿ ನಡೆದ ಭಾರತ-ನಾರ್ಡಿಕ್ ಎರಡನೇ ಶೃಂಗಸಭೆಯಿಂದ ಹಿಂದಿರುಗುವ ಮಾರ್ಗದಲ್ಲಿ ಪ್ರಧಾನಿ ನರೇಂದ್ರ ಮೋದಿ ಬುಧವಾರ ಫ್ರಾನ್ಸ್‌ಗೆ ಭೇಟಿ ನೀಡಿದರು. ಈ ವೇಳೆ ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರೋನ್ ಮತ್ತು ನಿಯೋಗ ಮಟ್ಟದ ಸಭೆ ನಡೆಸಿದ ಅವರು, ಉಕ್ರೇನ್ ಹಾಗೂ ಅಫ್ಘಾನಿಸ್ತಾನದಲ್ಲಿನ ಪರಿಸ್ಥಿತಿಗಳ ಬಗ್ಗೆಯೂ ಚರ್ಚಿಸಿದ್ದಾರೆ.
ಇದಲ್ಲದೇ, ರಕ್ಷಣಾ ಸಹಕಾರ, ಬಾಹ್ಯಾಕಾಶ, ಆರ್ಥಿಕತೆ, ನಾಗರಿಕ ಪರಮಾಣು ಮತ್ತು ಜನರ ನಡುವಿನ ಸಂಬಂಧ ಸೇರಿದಂತೆ ದ್ವಿಪಕ್ಷೀಯ ಒಪ್ಪಂದಗಳ ಬಗ್ಗೆ ಉಭಯ ನಾಯಕರು ಸಮಾಲೋಚಿಸಿದರು. ಭಾರತ-ಫ್ರಾನ್ಸ್ ಕಾರ್ಯತಂತ್ರದ ಪಾಲುದಾರಿಕೆಯನ್ನು ಜಾಗತಿಕ ಒಳಿತಿಗಾಗಿ ಒಂದು ಶಕ್ತಿಯನ್ನಾಗಿ ಮಾಡುವಲ್ಲಿ ಒಟ್ಟಾಗಿ ಕೆಲಸ ಮಾಡುವ ಮಾರ್ಗಗಳ ಕುರಿತು ಉಭಯ ನಾಯಕರು ಮಾತುಕತೆ ನಡೆಸಿದರು.
ಉಕ್ರೇನ್ ದಾಳಿಗೆ ಫ್ರಾನ್ಸ್ ಖಂಡನೆ:ಉಭಯ ನಾಯಕರ ಮಾತುಕತೆಯ ವೇಳೆ ಉಕ್ರೇನ್ ಸಂಘರ್ಷ, ಮಾನವ ಬಿಕ್ಕಟ್ಟಿನ ಬಗ್ಗೆ ಕಳವಳ ವ್ಯಕ್ತವಾಯಿತು. ರಷ್ಯಾ ಪಡೆಗಳಿಂದ ಉಕ್ರೇನ್ ವಿರುದ್ಧ ಕಾನೂನುಬಾಹಿರ ಮತ್ತು ಅಪ್ರಚೋದಿತ ಆಕ್ರಮಣವನ್ನು ಫ್ರಾನ್ಸ್ ಬಲವಾಗಿ ಖಂಡಿಸಿತು. ಉಕ್ರೇನ್‌ನಲ್ಲಿ ನಾಗರಿಕರ ಸಾವು-ನೋವನ್ನು ತಡೆಯಬೇಕಿದೆ, ಜನರ ದುಃಖಕ್ಕೆ ತಕ್ಷಣದ ಅಂತ್ಯವನ್ನು ಕಂಡುಕೊಳ್ಳಲು ಮಾತುಕತೆ ಮತ್ತು ರಾಜತಾಂತ್ರಿಕತೆಯನ್ನು ಮೆರೆಯಬೇಕಿದೆ. ಇದಕ್ಕಾಗಿ ಎಲ್ಲಾ ರಾಷ್ಟ್ರಗಳನ್ನು ಒಟ್ಟುಗೂಡಿಸಿ ಯುದ್ಧವನ್ನು ತಕ್ಷಣ ನಿಲ್ಲಿಸುವಂತೆ ಫ್ರಾನ್ಸ್ ಅಧ್ಯಕ್ಷರು ಕರೆ ನೀಡಿದರು.