ನವದೆಹಲಿ: ಪದ್ಮವಿಭೂಷಣ ಪ್ರಶಸ್ತಿಗೆ ಭಾಜನರಾಗಿದ್ದ ಜಪಾನ್ ಮಾಜಿ ಪ್ರಧಾನಿ ಶಿಂಜೋ ಅಬೆ ಗುಂಡಿನ ದಾಳಿಗೊಳಗಾಗಿ ಪ್ರಾಣ ಕಳೆದುಕೊಂಡಿದ್ದಾರೆ. ಅವರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಕಂಬನಿ ಮಿಡಿದಿದ್ದು, ಗೌರವಾರ್ಥವಾಗಿ ನಾಳೆ ಭಾರತದಲ್ಲಿ ಶೋಕಾಚರಣೆ ಘೋಷಣೆ ಮಾಡಿದ್ದಾರೆ. ಭಾರತದೊಂದಿಗೆ ಉತ್ತಮ ಒಡನಾಟ ಹೊಂದಿದ್ದ ಶಿಂಜೋ ಅಬೆಗೆ 2021ರಲ್ಲಿ ಕೇಂದ್ರ ಸರ್ಕಾರ ಪದ್ಮವಿಭೂಷಣ ಪ್ರಶಸ್ತಿ ನೀಡಿ ಗೌರವಿಸಿತ್ತು.
ಅವರ ಗೌರವಾರ್ಥವಾಗಿ ನಾಳೆ ಒಂದು ದಿನ ರಾಷ್ಟ್ರೀಯ ಶೋಕಾಚರಣೆ ನಡೆಸಲು ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದು, ಇದರ ಬಗ್ಗೆ ಟ್ವಿಟರ್ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. "ಮಾಜಿ ಪ್ರಧಾನಿ ಅಬೆ ಶಿಂಜೋ ಅವರಿಗೆ ನಮ್ಮ ಗೌರವದ ಸಂಕೇತವಾಗಿ, 9 ಜುಲೈ 2022 ರಂದು ಒಂದು ದಿನದ ರಾಷ್ಟ್ರೀಯ ಶೋಕಾಚರಣೆ ಆಚರಿಸಲಾಗುತ್ತದೆ" ಎಂದು ತಿಳಿಸಿದ್ದಾರೆ.
ಭಾರತ-ಜಪಾನ್ ನಡುವೆ ವಿಶೇಷ ಕಾರ್ಯತಂತ್ರ ಮತ್ತು ಜಾಗತಿಕ ಒಪ್ಪಂದದಲ್ಲಿ ಶಿಂಜೋ ಅಬೆ ಕೊಡುಗೆ ಅಪಾರವಾಗಿದ್ದು, ಭಾರತದ ಕಠಿಣ ಸಂದರ್ಭಗಳಲ್ಲಿ ಜಪಾನ್ ನಮ್ಮೊಂದಿಗೆ ನಿಂತಿದೆ. ಇಂದು ಜಪಾನ್ ಜೊತೆ ಭಾರತ ಸಹ ಶೋಕಾಚರಣೆ ಮಾಡುತ್ತಿದೆ ಎಂದಿದ್ದಾರೆ. ಜಪಾನ್ನಲ್ಲಿ ದೀರ್ಘಾವಧಿ ಪ್ರಧಾನಿಯಾಗಿ ಸೇವೆ ಸಲ್ಲಿಸಿರುವ ಅಬೆ, 2006ರಲ್ಲಿ ಒಂದು ವರ್ಷ ಹಾಗೂ 2012ರಿಂದ 2020ರವರೆಗೆ ಅಧಿಕಾರದಲ್ಲಿದ್ದರು.
ಇದನ್ನೂ ಓದಿರಿ:ಗುಂಡಿನ ದಾಳಿಗೊಳಗಾದ ಜಪಾನ್ ಮಾಜಿ ಪ್ರಧಾನಿ ಶಿಂಜೋ ಅಬೆ ಇನ್ನಿಲ್ಲ
ಜಪಾನ್‌ನ ಮಾಜಿ ಪ್ರಧಾನಿ ಶಿಂಜೊ ಅಬೆ ಅವರು ಇಂದು ಬೆಳಗ್ಗೆ ಪಶ್ಚಿಮ ಜಪಾನ್‌ನ ನಾರಾ ಪ್ರಿಫೆಕ್ಚರ್‌ನಲ್ಲಿ ಭಾಷಣ ಮಾಡುವಾಗ ಗುಂಡಿನ ದಾಳಿ ನಡೆದಿದೆ. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಅಬೆ ಅವರು ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ಘೋಷಿಸಿದ್ದಾರೆ. ಇವರ ನಿಧನಕ್ಕೆ ಕಾಂಗ್ರೆಸ್ ಮುಖ್ಯಸ್ಥೆ ಸೋನಿಯಾ ಗಾಂಧಿ ಸೇರಿದಂತೆ ಅನೇಕರು ಸಂತಾಪ ಸೂಚಿಸಿದ್ದಾರೆ.