ನವದೆಹಲಿ:ಶ್ರೇಷ್ಠ ಸಂಗೀತ ಸಾಧನೆಗೆ ನೀಡುವ ಗ್ರ್ಯಾಮಿ ಪ್ರಶಸ್ತಿ ಪಡೆದ ಇಂಡೋ-ಅಮೆರಿಕನ್ ಗಾಯಕಿ ಫಲ್ಗುಣಿ ಶಾ ಅವರನ್ನು ಪ್ರಧಾನಿ ನರೇಂದ್ರ ಮೋದಿ ಅಭಿನಂದಿಸಿದ್ದಾರೆ. ಅತ್ಯುತ್ತಮ ಮಕ್ಕಳ ಸಂಗೀತ ಆಲ್ಬಂ ವಿಭಾಗದಲ್ಲಿ 'ಎ ಕಲರ್‌ಫುಲ್ ವರ್ಲ್ಡ್' ಪ್ರಶಸ್ತಿಗೆ ಆಯ್ಕೆಯಾಗಿತ್ತು.
"ಅತ್ಯುತ್ತಮ ಮಕ್ಕಳ ಸಂಗೀತ ಆಲ್ಬಂ ಪ್ರಶಸ್ತಿಯನ್ನು ಗೆದ್ದಿದ್ದಕ್ಕಾಗಿ ಫಲ್ಗುಣಿ ಶಾ ಅವರಿಗೆ ಅಭಿನಂದನೆಗಳು. ಅವರ ಮುಂದಿನ ಕಾರ್ಯಗಳಿಗೆ ಶುಭ ಹಾರೈಸುತ್ತೇನೆ" ಎಂದು ಮೋದಿ ಟ್ವೀಟ್ ಮಾಡಿದ್ದಾರೆ. 40ರ ಹರೆಯದ ಶಾ ಅವರು ಜೈಪುರ ಸಂಗೀತ, ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಮತ್ತು ಕೌಮುದಿ ಮುನ್ಷಿ ಅವರ ಮೂಲಕ ಬನಾರಸ್ ಶೈಲಿಯ 'ಠುಮ್ರಿ'(ಭಾರತದ ಅರೆ-ಶಾಸ್ತ್ರೀಯ ಸಂಗೀತದ ಒಂದು ಸಾಮಾನ್ಯ ಶೈಲಿ) ಮತ್ತು ಉದಯ್ ಮಜುಂದಾರ್ ಅವರಿಂದ ಶಾಸ್ತ್ರೀಯ ಸಂಗೀತದಲ್ಲಿ ತರಬೇತಿ ಪಡೆದಿದ್ದಾರೆ.