ನವದೆಹಲಿ: ಗಾನ ಕೋಗಿಲೆ ಲತಾ ಮಂಗೇಶ್ಕರ್ ನಿಧನಕ್ಕೆ ರಾಜಕೀಯ ವಲಯದಲ್ಲಿ ಸಾಕಷ್ಟು ಮಂದಿ ಸಂತಾಪ ಸೂಚಿಸುತ್ತಿದ್ದಾರೆ. ಪ್ರಧಾನಿ ಮೋದಿ ಈ ಕುರಿತು ಟ್ವೀಟ್ ಮಾಡಿದ್ದು, ನಾನು ಹೇಳಲಾಗದಷ್ಟು ದುಃಖಿತನಾಗಿದ್ದೇನೆ. ದಯೆ ಮತ್ತು ಕಾಳಜಿಯುಳ್ಳ ಲತಾ ದೀದಿ ನಮ್ಮನ್ನು ಅಗಲಿದ್ದಾರೆ. ಅವರು ನಿಧನದಿಂದ ಶೂನ್ಯ ಆವರಿಸಿದೆ ಎಂದು ಸಂತಾಪ ವ್ಯಕ್ತಪಡಿಸಿದ್ದಾರೆ.
ಮುಂಬರುವ ಪೀಳಿಗೆಗಳು ಲತಾ ಮಂಗೇಶ್ಕರ್ ಅವರನ್ನು ಭಾರತೀಯ ಸಂಸ್ಕೃತಿಯ ನಿಷ್ಠಾವಂತರು ಎಂದೇ ಗುರ್ತಿಸುತ್ತವೆ. ಅವರ ಧ್ವನಿಯಲ್ಲಿ ಜನರನ್ನು ಮಂತ್ರ ಮುಗ್ದಗೊಳಿಸುವ ಸಾಮರ್ಥ್ಯ ಇತ್ತು ಎಂದು ಪ್ರಧಾನಿ ಮೋದಿ ಟ್ವೀಟ್ನಲ್ಲಿ ಉಲ್ಲೇಖಿಸಿದ್ದಾರೆ.
ಇದರ ಜೊತೆಗೆ ಲತಾ ದೀದಿ ಅವರ ಹಾಡುಗಳು ವಿವಿಧ ಭಾವನೆಗಳನ್ನು ವ್ಯಕ್ತಪಡಿಸುತ್ತವೆ. ಚಲನಚಿತ್ರಗಳನ್ನು ಹೊರತುಪಡಿಸಿ ಲತಾ ದೀದಿ ಅವರು ಯಾವಾಗಲೂ ಭಾರತದ ಬೆಳವಣಿಗೆಯ ಬಗ್ಗೆ ಉತ್ಸುಕರಾಗಿದ್ದರು. ಅವರು ಬಲಿಷ್ಠ ಮತ್ತು ಅಭಿವೃದ್ಧಿ ಹೊಂದಿದ ಭಾರತವನ್ನು ನೋಡಲು ಬಯಸಿದ್ದರು ಎಂದು ಮೋದಿ ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿ:ಬಹು ಅಂಗಾಂಗ ವೈಫಲ್ಯದಿಂದ ಲತಾ ಮಂಗೇಶ್ಕರ್ ನಿಧನ: ಆಸ್ಪತ್ರೆ ವೈದ್ಯರ ಮಾಹಿತಿ
ಲತಾ ದೀದಿಯವರಿಂದ ನಾನು ಅಪಾರ ಪ್ರೀತಿಯನ್ನು ಪಡೆದಿದ್ದೇನೆ. ಇದು ನನ್ನ ಗೌರವವೆಂದು ಪರಿಗಣಿಸುತ್ತೇನೆ. ಅವರೊಂದಿಗೆ ನಾನು ನಡೆಸಿದ ಮಾತುಕತೆಗಳು ಅವಿಸ್ಮರಣೀಯವಾಗಿ ಉಳಿಯುತ್ತವೆ. ಲತಾ ದೀದಿ ಅವರ ನಿಧನಕ್ಕೆ ಎಲ್ಲಾ ಭಾರತೀಯರೊಂದಿಗೆ ನಾನೂ ಸಂತಾಪ ಸೂಚಿಸುತ್ತೇನೆ ಎಂದು ಮೋದಿ ದುಃಖ ವ್ಯಕ್ತಪಡಿಸಿದ್ದಾರೆ.