ನವದೆಹಲಿ:ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಗೊಳ್ಳುತ್ತಿದ್ದು, ಇಂದು ಪ್ರಧಾನಿ ನರೇಂದ್ರ ಮೋದಿ ವರ್ಚುಯಲ್ ಸಭೆ ಮೂಲಕ ಅಲ್ಲಿನ ಅಭಿವೃದ್ಧಿ ಕಾರ್ಯ, ರೂಪುರೇಷೆ ಸೇರಿದಂತೆ ಕಾರ್ಯಪ್ರಗತಿ ಬಗ್ಗೆ ಪರಿಶೀಲನೆ ನಡೆಸಿದರು. ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸೇರಿದಂತೆ ಅನೇಕರು ಈ ಸಭೆಯಲ್ಲಿ ಭಾಗಿಯಾಗಿದ್ದರು.
ಈ ವೇಳೆ ಮಾತನಾಡಿರುವ ಪ್ರಧಾನಿ ನರೇಂದ್ರ ಮೋದಿ ಅಯೋಧ್ಯೆ ರಾಮಮಂದಿರ ಭಾರತೀಯ ಸಂಪ್ರದಾಯ ಹಾಗೂ ಅಭಿವೃದ್ಧಿಯ ಪ್ರತೀಕವಾಗಿದ್ದು, ಭವಿಷ್ಯದ ದಿನ ಗಮನದಲ್ಲಿಟ್ಟುಕೊಂಡು ಅಗತ್ಯ ಮೂಲ ಸೌಕರ್ಯ ಕಲ್ಪಿಸಬೇಕು ಎಂದರು.
ಮುಂದಿನ ಪೀಳಿಗೆ ತಮ್ಮ ಜೀವಿತಾವಧಿಯಲ್ಲಿ ಒಂದು ಸಲವಾದರೂ ಅಯೋಧ್ಯೆಗೆ ಭೇಟಿ ನೀಡಬೇಕೆಂಬ ಬಯಕೆ ಇಟ್ಟುಕೊಂಡು ಇಲ್ಲಿಗೆ ಬರಬೇಕು. ಆ ರೀತಿಯಾಗಿ ರಾಮ ಮಂದಿರ ನಿರ್ಮಾಣ ಮಾಡಬೇಕು ಎಂದು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಕಳೆದ ವರ್ಷ ಆಗಸ್ಟ್ 5ರಂದು ಪ್ರಧಾನಿ ನರೇಂದ್ರ ಮೋದಿ ಅಯೋಧ್ಯೆಗೆ ಭೇಟಿ ನೀಡಿ, ಭೂಮಿ ಪೂಜೆ ಕಾರ್ಯದಲ್ಲಿ ಭಾಗಿಯಾಗಿದ್ದರು.