ಜಲೌನ್(ಉತ್ತರ ಪ್ರದೇಶ): 'ದೇಶದಲ್ಲಿ ಉಚಿತ ರೇವಡಿ ಹಂಚುವ ಸಂಸ್ಕೃತಿ ಹುಟ್ಟಿಕೊಂಡಿದ್ದು, ಇದು ದೇಶದ ಅಭಿವೃದ್ಧಿಗೆ ಅಪಾಯಕಾರಿ' ಎಂದು ಪ್ರಧಾನಿ ನರೇಂದ್ರ ಮೋದಿ ವಿರೋಧ ಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದರು. ಉತ್ತರ ಪ್ರದೇಶದ ಬುಂದೇಲ್ಖಂಡ್ ಎಕ್ಸ್ಪ್ರೇಸ್ವೇ ಲೋಕಾರ್ಪಣೆಗೊಳಿಸಿ ಮಾತನಾಡಿದ ಪ್ರಧಾನಿ, ನಾವೆಲ್ಲರೂ ಒಗ್ಗಟ್ಟಿನಿಂದ ದೇಶದ ರಾಜಕೀಯದಲ್ಲಿರುವ ರೇವಡಿ ಸಂಸ್ಕೃತಿ ತೊಡೆದು ಹಾಕಬೇಕಾಗಿದೆ ಎಂದರು.
ರೇವಡಿ ಸಂಸ್ಕೃತಿ ಹೊಂದಿರುವವರು ನಿಮಗೋಸ್ಕರ ಹೊಸ ಎಕ್ಸ್‌ಪ್ರೆಸ್‌ವೇ, ಹೊಸ ವಿಮಾನ ನಿಲ್ದಾಣ ಅಥವಾ ರಕ್ಷಣಾ ಕಾರಿಡಾರ್ ನಿರ್ಮಾಣ ಮಾಡಲ್ಲ. ಉಚಿತ ರೇವಡಿ ಹಂಚುವ ಮೂಲಕ ಮತ ಸಂಗ್ರಹಿಸುವ ಕೆಲಸ ಮಾಡ್ತಿದ್ದಾರೆ. ಇದು ದೇಶಕ್ಕೆ ಅಪಾಯಕಾರಿಯಾಗಿದೆ ಎಂದು ಕಿಡಿಕಾರಿದರು.
ಬುಂದೇಲ್ಖಂಡ್ ಎಕ್ಸ್ಪ್ರೇಸ್ವೇ ಲೋಕಾರ್ಪಣೆ: ಉತ್ತರ ಪ್ರದೇಶದ ಬುಂದೇಲ್ಖಂಡ್ದಲ್ಲಿ ನಿರ್ಮಾಣಗೊಂಡಿರುವ ಬರೋಬ್ಬರಿ 14,850 ಕೋಟಿ ರೂಪಾಯಿ ವೆಚ್ಚದ ಎಕ್ಸ್‌ಪ್ರೆಸ್‌ವೇ ಲೋಕಾರ್ಪಣೆಗೊಳಿಸಿದ ನರೇಂದ್ರ ಮೋದಿ, ಉತ್ತರ ಪ್ರದೇಶದಲ್ಲಿ ಮೂಲಭೂತ ಸೌಕರ್ಯ ಕೆಲಸಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗ್ತಿದೆ. ಈ ಮೂಲಕ ಅನೇಕ ಉತ್ತಮ ಸಾಧನೆ ಮಾಡಿರುವ ರಾಜ್ಯಗಳ ಸಾಲಿನಲ್ಲೂ ಉತ್ತರ ಪ್ರದೇಶ ಸಹ ನಿಲ್ಲುತ್ತದೆ ಎಂದು ತಿಳಿಸಿದರು.
ದೇಶಕ್ಕೆ ಹಾನಿ ಉಂಟು ಮಾಡುವ, ದೇಶದ ಅಭಿವೃದ್ಧಿ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಎಲ್ಲರನ್ನೂ ನಾವು ದೂರವಿಡಬೇಕು. ಉತ್ತರ ಪ್ರದೇಶ ಅಸಂಖ್ಯಾತ ಯೋಧರನ್ನ ಹುಟ್ಟುಹಾಕಿರುವ ಭೂಮಿ. ಈ ಮಣ್ಣಿನಲ್ಲಿ ನಿಂತುಕೊಂಡು ಎಕ್ಸ್ಪ್ರೆಸ್ ವೇ ಲೋಕಾರ್ಪಣೆಗೊಳಿಸಲು ಹೆಮ್ಮೆಯಾಗುತ್ತದೆ ಎಂದರು.