ಕರ್ನಾಟಕ

karnataka

ETV Bharat / bharat

'ದೇಶ ಒಡೆಯುವ ಶಕ್ತಿಗಳಿಂದ ಎಚ್ಚರದಿಂದಿರಿ': ಬಿಬಿಸಿ ಸಾಕ್ಷ್ಯಚಿತ್ರಕ್ಕೆ ಪ್ರಧಾನಿ ಮೋದಿ ಪರೋಕ್ಷ ಟೀಕೆ - caution against attempts to sow differences

ದೇಶವನ್ನು ಒಡೆಯುವ ಶಕ್ತಿಗಳಿಂದ ಎಚ್ಚರವಿರಬೇಕು. ಇದನ್ನು ಎದುರಿಸಲು ಏಕತೆಯೇ ಮಂತ್ರ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ದೆಹಲಿಯಲ್ಲಿ ನಡೆದ ಎನ್​ಸಿಸಿ 75 ನೇ ವರ್ಷಾಚರಣೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

pm-modi
ಬಿಬಿಸಿ ಸಾಕ್ಷ್ಯಚಿತ್ರಕ್ಕೆ ಪ್ರಧಾನಿ ಮೋದಿ ಪರೋಕ್ಷ ಟೀಕೆ

By

Published : Jan 29, 2023, 11:28 AM IST

Updated : Jan 29, 2023, 11:45 AM IST

ನವದೆಹಲಿ: "ದೇಶದಲ್ಲಿ ಒಡಕು ಮೂಡಿಸುವ ಮತ್ತು ಭಿನ್ನಮತವನ್ನೇ ಬಿತ್ತುವ ಪ್ರಯತ್ನಗಳು ಹೆಚ್ಚಾಗಿ ನಡೆಯುತ್ತಿವೆ. ಅಂಥವುಗಳಿಂದ ನಾವು ಎಚ್ಚರಿಕೆ ವಹಿಸಬೇಕು. ಅಲ್ಲದೇ, ಇವ್ಯಾವ ಪ್ರಯತ್ನಗಳೂ ಯಶಸ್ವಿಯಾಗಲು ಸಾಧ್ಯವಿಲ್ಲ. ದೇಶ ಭವ್ಯತೆಯನ್ನು ಕಾಣಬೇಕಾದರೆ ಏಕತೆಯೊಂದೇ ಮಂತ್ರವಾಗಿದೆ" ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಪ್ರತಿಪಾದಿಸಿದರು.

ದೆಹಲಿಯಲ್ಲಿ ಶನಿವಾರ ನಡೆದ ಕಾರ್ಯಕ್ರಮದಲ್ಲಿ, ಗಣರಾಜ್ಯೋತ್ಸವದ ವೇಳೆ ಭಾಗವಹಿಸಿದ್ದ ಎನ್‌ಸಿಸಿ ಕೆಡೆಟ್‌ಗಳನ್ನು ಉದ್ದೇಶಿಸಿ ಮಾತನಾಡಿದ ಮೋದಿ, "ದೇಶದ ಯುವಕರಿಗೆ ಇದು ಹೊಸ ಅವಕಾಶಗಳ ಕಾಲ. ಯುವಶಕ್ತಿಯಿಂದಾಗಿ ಇಡೀ ವಿಶ್ವವೇ ಭಾರತದತ್ತ ನೋಡುತ್ತಿದೆ. ಇದು ನಮ್ಮ ಸಮಯ ಬಂದಿದೆ ಎಂಬುದನ್ನು ಸ್ಪಷ್ಟಪಡಿಸುತ್ತದೆ" ಎಂದು ಹೇಳಿದರು.

ಇದೇ ವೇಳೆ, "ದೇಶವನ್ನು ವಿಭಜಿಸುವ ಪ್ರಯತ್ನಗಳು ಜಾರಿಯಲ್ಲಿವೆ. ಇವು ನಮಗಷ್ಟೇ ಅಲ್ಲ, ದೇಶಕ್ಕೂ ಮಾರಕ. ಇಂತಹ ಪ್ರಯತ್ನಗಳಿಂದ ಎಚ್ಚರಿಕೆ ವಹಿಸಬೇಕಿದೆ. ದೇಶವನ್ನು ಇಬ್ಭಾಗ ಮಾಡುವ ನೆಪದಲ್ಲಿ ಹಲವಾರು ಸಮಸ್ಯೆಗಳನ್ನು ಕೆಲವರು ಪ್ರಸ್ತಾಪಿಸುತ್ತಿದ್ದಾರೆ. ಭಾರತಮಾತೆಯ ಮಕ್ಕಳನ್ನು ವಿಘಟನೆ ಮಾಡುವುದೇ ಇವರ ಉದ್ದೇಶ. ಈ ಎಲ್ಲ ಶಕ್ತಿಗಳನ್ನು ನಾವು ಮೀರಬೇಕಿದೆ" ಎಂದು ಕರೆ ಕೊಟ್ಟರು.

"ಇಂತಹ ಪ್ರಯತ್ನಗಳ ಎಷ್ಟೇ ಮುಂದುವರಿಸಿದರೂ, ಜನರಲ್ಲಿ ಎಂದಿಗೂ ಭಿನ್ನಾಭಿಪ್ರಾಯ ಉಂಟಾಗುವುದಿಲ್ಲ. ತಾಯಿಯ ಎದೆ ಹಾಲು ಎಷ್ಟು ಶುದ್ಧವೋ, ಅದರಲ್ಲಿ ಕಲ್ಮಶ ಉಂಟಾಗಲು ಸಾಧ್ಯವಿಲ್ಲವೋ? ಅದೇ ರೀತಿ ನಮ್ಮನ್ನು ಯಾರಿಂದಲೂ ಒಡೆಯಲು ಸಾಧ್ಯವಿಲ್ಲ" ಎಂದರು.

ಏಕತೆಯ ಪ್ರತಿಜ್ಞೆಯೇ ಮೂಲಮಂತ್ರ: "ದೇಶವನ್ನು ಒಡೆಯಲು ನಡೆಯುತ್ತಿರುವ ಯತ್ನಗಳನ್ನು ತಡೆಯಲು ನಮಗಿರುವ ಮಾರ್ಗವೆಂದರೆ ಅದು ಏಕತೆಯ ಮಂತ್ರ. ಇದೇ ಅಂತಿಮವಾಗಿದೆ. ಈ ಮಂತ್ರವೇ ದೇಶದ ಶಕ್ತಿಯಾಗಿದೆ. ಭಾರತ ವಿಶ್ವದಲ್ಲಿ ಅಖಂಡತೆಯನ್ನು ಸಾಧಿಸಲು ಇರುವ ಏಕೈಕ ಮಾರ್ಗವಾಗಿದೆ" ಎಂದು ಬಿಬಿಸಿಯ ವಿವಾದಿತ ಸಾಕ್ಷ್ಯಚಿತ್ರವನ್ನು ಪ್ರಸ್ತಾಪಿಸದೆಯೇ ದೇಶ ಒಡೆಯುವ ಶಕ್ತಿ ಎಂದು ಟೀಕಿಸಿದ್ದಾರೆ.

ಇದೇ ವೇಳೆ ಗಣರಾಜ್ಯೋತ್ಸವದಲ್ಲಿ ಭಾಗವಹಿಸಿದ ಎನ್‌ಸಿಸಿ ಕೆಡೆಟ್‌ಗಳನ್ನು ಶಹಬ್ಬಾಸ್ ನೀಡಿದ ಪ್ರಧಾನಿ, "ದೇಶಕ್ಕೆ ಯಾವಾಗಲೂ ಯುವಕರೇ ಆದ್ಯತೆ. ಅವರ ಶಕ್ತಿ, ಉತ್ಸಾಹವೇ ಮೊದಲಾಗಿದೆ. ಸ್ಟಾರ್ಟ್‌ಅಪ್‌ಗಳು ಭಾರಿ ಪ್ರಗತಿ ಸಾಧಿಸುತ್ತಿವೆ. ಬಾಹ್ಯಾಕಾಶ ಮತ್ತು ರಕ್ಷಣಾ ಕ್ಷೇತ್ರಗಳಲ್ಲಿ ಖಾಸಗಿ ಸಹಭಾಗಿತ್ವವನ್ನು ಸರ್ಕಾರ ಪ್ರೋತ್ಸಾಹಿಸುತ್ತಿರುವುದರಿಂದ ಯುವಕರಿಗೆ ಅಪಾರ ಅವಕಾಶಗಳಿವೆ" ಎಂದು ಅವರು ಹೇಳಿದರು.

"ಕೇಂದ್ರ ಸರ್ಕಾರ ಡಿಜಿಟಲ್, ಸ್ಟಾರ್ಟ್ ಅಪ್ ಮತ್ತು ಕೌಶಲ್ಯ ಕ್ರಾಂತಿಯನ್ನು ಮಾಡಿದೆ. ಇದು ಹಲವಾರು ಮೊದಲುಗಳಿಗೆ ಸಾಕ್ಷಿಯಾಗಿದೆ. ಉದ್ಯೋಗದ ಅವಕಾಶಗಳನ್ನೂ ಹೆಚ್ಚಿಸಿದೆ. ಸರ್ಕಾರದ ನಿಲುವುಗಳು ಯುವಜನತೆಯ ಪರವಾಗಿವೆ" ಎಂದು ಪ್ರಧಾನಿ ಮೋದಿ ಹೇಳಿದರು.

ರಕ್ಷಣಾ ಕ್ಷೇತ್ರದಲ್ಲಿ ಸುಧಾರಣೆ:ರಕ್ಷಣಾ ಕ್ಷೇತ್ರದಲ್ಲಿನ ಸುಧಾರಣೆಗಳನ್ನು ಪ್ರಸ್ತಾಪಿಸಿದ ಪ್ರಧಾನಿ, "ಮೊದಲು ಆಮದು ಮಾಡಿಕೊಳ್ಳಲಾಗಿದ್ದ ಅಸಾಲ್ಟ್ ರೈಫಲ್‌ಗಳನ್ನು ಈಗ ದೇಶದೊಳಗೆ ತಯಾರಿಸಲಾಗುತ್ತಿದೆ. ಗಡಿಯಲ್ಲಿ ಸೈನಿಕರು, ಜನರಿಗೆ ಮೂಲಸೌಕರ್ಯ ಒದಗಿಸುವ ಕಾರ್ಯಗಳು ವೇಗವಾಗಿ ನಡೆಯುತ್ತಿವೆ. ಸಾಧ್ಯತೆಗಳ ಹೊಸ ಜಗತ್ತು ತೆರೆದುಕೊಳ್ಳುತ್ತಿದೆ" ಎಂದು ಹೇಳಿದರು.

"ದೇಶದ ಹೆಣ್ಣುಮಕ್ಕಳಿಗೆ ಇಂದು ಹಲವು ಅವಕಾಶಗಳ ಬಾಗಿಲು ತೆರೆಯಲಾಗಿದೆ. ಕಳೆದ 8 ವರ್ಷಗಳಲ್ಲಿ ಪೊಲೀಸ್ ಮತ್ತು ಅರೆಸೇನಾ ಪಡೆಗಳಲ್ಲಿ ಮಹಿಳಾ ಶಕ್ತಿ ಹೆಚ್ಚಿದೆ. ಮೂರೂ ಸಶಸ್ತ್ರ ಪಡೆಗಳಲ್ಲಿ ಮಹಿಳೆಯರ ನಿಯೋಜನೆ ಮಾಡಲಾಗಿದೆ. ನೌಕಾಪಡೆಯಲ್ಲಿ ನಾವಿಕರಾಗಿ ಮಹಿಳೆಯರನ್ನು ನೇಮಿಸಿಕೊಳ್ಳಲಾಗಿದೆ. ಸಶಸ್ತ್ರ ಪಡೆಗಳಲ್ಲಿ ಮಹಿಳೆಯರು ಯುದ್ಧ ಭೂಮಿಯಲ್ಲೂ ಹೋರಾಡಲು ಪ್ರವೇಶ ಪಡೆದಿದ್ದಾರೆ" ಎಂದು ತಿಳಿಸಿದರು.

75 ರೂ. ವಿಶೇಷ ನಾಣ್ಯ ಬಿಡುಗಡೆ:ಎನ್​ಸಿಸಿಗೆ 75 ವರ್ಷ ತುಂಬಿದ ಹಿನ್ನೆಲೆಯಲ್ಲಿ 75 ರೂಪಾಯಿ ಮುಖಬೆಲೆಯ ವಿಶೇಷ ನಾಣ್ಯವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಇದೇ ವೇಳೆ ಬಿಡುಗಡೆ ಮಾಡಿದರು. ರಕ್ಷಣಾ ಸಚಿವ ರಾಜನಾಥ್ ಸಿಂಗ್, ಎನ್‌ಸಿಸಿ ಮಹಾನಿರ್ದೇಶಕ ಲೆಫ್ಟಿನೆಂಟ್ ಜನರಲ್ ಗುರ್ಬೀರ್‌ಪಾಲ್ ಸಿಂಗ್, ರಕ್ಷಣಾ ಸಿಬ್ಬಂದಿ ಮುಖ್ಯಸ್ಥ ಅನಿಲ್ ಚೌಹಾಣ್, ಸೇನಾ ಮುಖ್ಯಸ್ಥ ಜನರಲ್ ಮನೋಜ್ ಪಾಂಡೆ, ನೌಕಾಪಡೆ ಮುಖ್ಯಸ್ಥ ಅಡ್ಮಿರಲ್ ಆರ್ ಹರಿಕುಮಾರ್, ವಾಯುಪಡೆ ಮುಖ್ಯಸ್ಥ ವಿ ಆರ್.ಚೌಧರಿ ಮತ್ತು ರಕ್ಷಣಾ ಕಾರ್ಯದರ್ಶಿ ಗಿರ್ಧರ್ ಅರ್ಮಾನೆ ಕಾರ್ಯಕ್ರಮದಲ್ಲಿ ಇದ್ದರು.

ಇದನ್ನೂ ಓದಿ:'ಪಾಂಡವರು ಕೂಡಾ ತಮ್ಮ ಸಂಬಂಧಿಗಳನ್ನು ಆಯ್ಕೆ ಮಾಡಲಿಲ್ಲ, ನೆರೆಹೊರೆ ದೇಶಗಳ ವಿಚಾರದಲ್ಲಿ ನಾವೂ ಅಷ್ಟೇ'

Last Updated : Jan 29, 2023, 11:45 AM IST

ABOUT THE AUTHOR

...view details