ನವದೆಹಲಿ: ದೇಶದಲ್ಲಿ ಎರಡನೇ ಹಂತದ ಕೋವಿಡ್ ಅಲೆ ಜೋರಾಗಿ ಬೀಸುತ್ತಿದ್ದು, ಕಳೆದ 24 ಗಂಟೆಯಲ್ಲಿ ದೇಶದಲ್ಲಿ 3 ಲಕ್ಷಕ್ಕೂ ಅಧಿಕ ಕೊರೊನಾ ಮಹಾಮಾರಿ ಪ್ರಕರಣಗಳು ದಾಖಲಾಗಿದ್ದು, ಇದು ಪ್ರಧಾನಿ ಮೋದಿ ನಿದ್ದೆಗೆಡಿಸಿದೆ.
ಈಗಾಗಲೇ ವಿವಿಧ ರಾಜ್ಯದ ಹಿರಿಯ ಅಧಿಕಾರಿಗಳೊಂದಿಗೆ ಆಕ್ಸಿಜನ್ ಕೊರತೆ ಹಾಗೂ ಔಷಧ ಲಭ್ಯತೆ ಬಗ್ಗೆ ಉನ್ನತ ಮಟ್ಟದ ಸಭೆ ನಡೆಸಿರುವ ಪ್ರಧಾನಿ ಮೋದಿ ನಾಳೆ ಕೂಡ ಕೋವಿಡ್ ವಿಚಾರವಾಗಿ ಉನ್ನತ ಮಟ್ಟದ ಸಭೆ ನಡೆಸಲು ನಿರ್ಧರಿಸಿದ್ದಾರೆ. ಇದೇ ಕಾರಣಕ್ಕಾಗಿ ಪಶ್ಚಿಮ ಬಂಗಾಳ ಪ್ರವಾಸ ರದ್ದುಗೊಳಿಸಿದ್ದಾರೆ.
ಪಶ್ಚಿಮ ಬಂಗಾಳದಲ್ಲಿನ 7ನೇ ಹಂತದ ಚುನಾವಣೆಗೋಸ್ಕರ ನಾಳೆ ಪ್ರಧಾನಿ ಮೋದಿ ಪ್ರಚಾರ ಸಭೆ ನಡೆಸಬೇಕಾಗಿತ್ತು. ಆದರೆ, ದೇಶದಲ್ಲಿ ಮಹಾಮಾರಿ ಕೊರೊನಾ ವೈರಸ್ ಹಾವಳಿ ಹೆಚ್ಚಾಗಿರುವ ಕಾರಣ ತಮ್ಮ ಪ್ರವಾಸ ಮೊಟಕುಗೊಳಿಸಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ನಮೋ ಖುದ್ದಾಗಿ ಟ್ವೀಟ್ ಮಾಡಿದ್ದಾರೆ. ಇದೇ ಮೊದಲ ಸಲ ಪ್ರಧಾನಿ ನರೇಂದ್ರ ಮೋದಿ ತಮ್ಮ ಚುನಾವಣಾ ಪ್ರಚಾರ ಪ್ರವಾಸ ರದ್ದುಗೊಳಿಸಿದ್ದಾರೆ.
ಮೋದಿ ಕಾರ್ಯಕ್ರಮ ಇಂತಿವೆ: ನಾಳೆ ಬೆಳಗ್ಗೆ 9 ಗಂಟೆಗೆ ಕೋವಿಡ್ ಸಂಬಂಧಿತ ಪರಿಸ್ಥಿತಿಗಳ ಬಗ್ಗೆ ಆಂತರಿಕ ಸಭೆ ನಡೆಸಲಿರುವ ನಮೋ, ಬೆಳಗ್ಗೆ 10 ಗಂಟೆಗೆ ಹೆಚ್ಚು ಕೋವಿಡ್ ಸೋಂಕಿತರು ಇರುವ ಸಿಎಂಗಳೊಂದಿಗೆ ಸಂವಾದ ನಡೆಸಲಿದ್ದಾರೆ. ಇದಾದ ಬಳಿಕ ಮಧ್ಯಾಹ್ನ 12:30ಕ್ಕೆ ದೇಶದ ಪ್ರಮುಖ ಆಮ್ಲಜನಕ ತಯಾರಕರೊಂದಿಗೆ ಸಭೆ ನಡೆಸಲಿದ್ದಾರೆ.