ಅಹಮದಾಬಾದ್(ಗುಜರಾತ್):ಗುಜರಾತ್ ವಿಧಾನಸಭೆಗೆ ಚುನಾವಣೆ ಘೋಷಣೆಯಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ಇಲ್ಲಿನ ಕಪರ್ದಾದಲ್ಲಿ ಇಂದು ಭರ್ಜರಿ ಪ್ರಚಾರ ನಡೆಸಿದರು. "ಗುಜರಾತ್ ನಾನು ನಿರ್ಮಿಸಿದ್ದೇನೆ" ಎಂದು ಘೋಷವಾಕ್ಯ ಮೊಳಗಿಸಿದರು.
ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ, ದ್ವೇಷವನ್ನು ಹರಡುವ ಮತ್ತು ಗುಜರಾತ್‌ಗೆ ಕಂಟಕವಾಗುವ ಶಕ್ತಿಗಳನ್ನು ಮುಂದಿನ ತಿಂಗಳು ನಡೆಯುವ ಚುನಾವಣೆಯ ಮೂಲಕ ರಾಜ್ಯದಿಂದಲೇ ಹೊರದಬ್ಬಲಾಗುವುದು ಎಂದು ವಾಗ್ದಾಳಿ ನಡೆಸಿದರು.
ಗುಜರಾತ್‌ನಲ್ಲಿ ಈ ಬಾರಿಯ ಎಲೆಕ್ಷನ್ನಲ್ಲಿ ದಾಖಲೆಯ ಅಂತರದಲ್ಲಿ ಬಿಜೆಪಿ ಗೆಲುವು ಸಾಧಿಸಲಿದೆ ಎಂಬ ಮಾಹಿತಿ ಲಭ್ಯವಾಗಿದೆ. ನನ್ನ ಆಡಳಿತದ ಅವಧಿಗಿಂತಲೂ ಈ ಬಾರಿ ಹೆಚ್ಚಿನ ಸಂಖ್ಯೆಯಲ್ಲಿ ಗೆದ್ದು ಇತಿಹಾಸ ನಿರ್ಮಿಸಲಿದೆ. ಚುನಾವಣೆಗೆ ಹೆಚ್ಚಿನ ಸಮಯ ಹೊಂದಿಸಲು ಸಿದ್ಧನಿದ್ದೇನೆ ಎಂದು ಮೋದಿ ಹೇಳಿದರು.
ಆಪ್ ವಿರುದ್ಧ ಕಿಡಿ:ರಾಜ್ಯದಲ್ಲಿ ಕೆಲವರು ಬಿಜೆಪಿ ವಿರುದ್ಧ ಜನರಲ್ಲಿ ದ್ವೇಷ ಬಿತ್ತುತ್ತಿದ್ದಾರೆ. ಅಂಥವರಿಗೆ ಚುನಾವಣೆಯಲ್ಲಿ ಉತ್ತರ ನೀಡಲಾಗುವುದು. ಗುಜರಾತಿನಿಂದಲೇ ಅಂಥವರನ್ನು ಹೊರದಬ್ಬಲಾಗುವುದು ಎಂದು ಆಪ್ ಪಕ್ಷದ ವಿರುದ್ಧ ಗುಡುಗಿದರು.
ನಾನು ಸೃಷ್ಟಿಸಿದ ಗುಜರಾತ್:ಆರಂಭದಲ್ಲಿ ಗುಜರಾತಿ ಭಾಷೆಯಲ್ಲಿಯೇ ಭಾಷಣ ಆರಂಭಿಸಿದ ಪ್ರಧಾನಿ ಮೋದಿ ಅವರು, ಆ ಗುಜರಾತ್, ಮೈ ಬ್ನವೂ ಛೇ (ನಾನು ಸೃಷ್ಟಿಸಿದ ಗುಜರಾತ್) ಎಂದು ಘೋಷಣೆ ಮೊಳಗಿಸಿದರು.
182 ಸ್ಥಾನಗಳ ಗುಜರಾತ್ ವಿಧಾನಸಭೆಗೆ ಡಿಸೆಂಬರ್ 1 ಮತ್ತು 5 ರಂದು ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದ್ದು, ಡಿಸೆಂಬರ್ 8 ರಂದು ಮತ ಎಣಿಕೆ ನಡೆಯಲಿದೆ. ಈ ಬಾರಿ ಆಮ್ ಆದ್ಮಿ ಪಕ್ಷ ಭರ್ಜರಿ ಪ್ರಚಾರ ನಡೆಸಿ ಕಣಕ್ಕಿಳಿದಿದ್ದು, ಇದರ ಜೊತೆಗೆ ಬಿಜೆಪಿ ಮತ್ತು ಕಾಂಗ್ರೆಸ್ ಸೇರಿ ತ್ರಿಕೋನ ಸ್ಪರ್ಧೆ ನಡೆಯಲಿದೆ.
ಇದನ್ನೂ ಓದಿ:ಉಪ ಚುನಾವಣೆ ಗುದ್ದಾಟದಲ್ಲಿ 'ಕಮಲ' ಕಮಾಲ್; ಕೆಲವೆಡೆ ಅಚ್ಚರಿ ಫಲಿತಾಂಶ