ನವದೆಹಲಿ:ಭಾರತೀಯ ವಿದ್ಯಾರ್ಥಿಗಳು ವೈದ್ಯಕೀಯ ಶಿಕ್ಷಣ ಪಡೆಯಲು ವಿದೇಶಗಳಿಗೆ ತೆರಳುವುದನ್ನು ತಡೆಯಲು ಸ್ಥಳೀಯವಾಗಿಯೇ ಗುಣಮಟ್ಟದ ವೈದ್ಯಕೀಯ ಶಿಕ್ಷಣ ಸಿಗುವಂತಾಗಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ. ಅಲ್ಲದೇ, ಗುಣಮಟ್ಟದ ವೈದ್ಯಕೀಯ ಶಿಕ್ಷಣಕ್ಕಾಗಿ ಖಾಸಗಿ ಸಂಸ್ಥೆಗಳ ಸಹಭಾಗಿತ್ವ ಹೆಚ್ಚಬೇಕು ಎಂದು ಹೇಳಿದ್ದಾರೆ.
ವೈದ್ಯಕೀಯ ಕ್ಷೇತ್ರಕ್ಕೆ ಬಜೆಟ್ನಲ್ಲಿ ಘೋಷಿಸಲಾದ ಕಾರ್ಯಕ್ರಮಗಳ ಬಗ್ಗೆ ನಡೆದ ವೆಬಿನಾರ್ ಸಂವಾದದಲ್ಲಿ ಮಾತನಾಡಿದ ಅವರು, ವೈದ್ಯಕೀಯ ಶಿಕ್ಷಣಕ್ಕಾಗಿ ರಾಜ್ಯ ಸರ್ಕಾರಗಳು ಉತ್ತಮ ನೀತಿಗಳನ್ನು ರೂಪಿಸಬೇಕು. ಭಾರತವೇ ವೈದ್ಯಕೀಯ ಕ್ಷೇತ್ರದ ಜಾಗತಿಕ ಬೇಡಿಕೆಗಳನ್ನು ಪೂರೈಕೆ ಮಾಡುವಷ್ಟು ಶಕ್ತವಾಗಬೇಕು. ಹೀಗಾಗಿ ಹೆಚ್ಚಿನ ಸಂಖ್ಯೆಯ ವೈದ್ಯರು ಮತ್ತು ಅರೆವೈದ್ಯರನ್ನು ಸೃಷ್ಟಿಸಬೇಕು ಎಂದು ಹೇಳಿದ್ದಾರೆ.
ರಷ್ಯಾ ದಾಳಿಗೀಡಾಗಿ ಉಕ್ರೇನ್ನಲ್ಲಿ ಸಿಲುಕಿಕೊಂಡಿರುವ ಭಾರತೀಯ ವಿದ್ಯಾರ್ಥಿಗಳು, ಅದರಲ್ಲೂ ವೈದ್ಯಕೀಯ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳ ರಕ್ಷಣೆ ಚುರುಕು ಪಡೆದಿದೆ. ಈ ಸಮಯದಲ್ಲಿ ಪ್ರಧಾನಿ ಮೋದಿ ಅವರ ಈ ಹೇಳಿಕೆ ಹೆಚ್ಚಿನ ಮಹತ್ವ ಪಡೆದುಕೊಂಡಿದೆ.