ನವದೆಹಲಿ :ಉದ್ಯಮ, ಸೃಜನಶೀಲತೆ ಮತ್ತು ಭಾರತೀಯ ಸಂಸ್ಕೃತಿಯನ್ನು ಬಿಂಬಿಸುವ ಕೆಲವೊಂದು ಉತ್ಪನ್ನಗಳನ್ನು ಖರೀದಿಸುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಆಚರಿಸಿದರು.
ಆತ್ಮನಿರ್ಭರ ಭಾರತ ಅಭಿಯಾನದಲ್ಲಿ ಮಹಿಳೆಯರು ಪ್ರಮುಖ ಪಾತ್ರ ವಹಿಸುತ್ತಿದ್ದಾರೆ ಎಂದು ಟ್ವೀಟ್ ಮಾಡಿರುವ ಪ್ರಧಾನಿ ಮೋದಿ, ಉದ್ಯಮಶೀಲತೆ ಉತ್ತೇಜಿಸಲು ಮಹಿಳೆಯರು ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು ಎಂದು ಮಹಿಳೆಯರಿಗೆ ಕರೆ ನೀಡಿದ್ದಾರೆ.
ತಾನು ಖರೀದಿಸಿದ ಉತ್ಪನ್ನಗಳ ವಿವರಗಳನ್ನು ಹಂಚಿಕೊಂಡಿರುವ ಮೋದಿ, ತಮಿಳುನಾಡಿನ ತೋಡಾ ಬುಡಕಟ್ಟಿನ ಕುಶಲಕರ್ಮಿಗಳು ತಯಾರಿಸಿದ ಕೈ ಕಸೂತಿ ಶಾಲು ಅದ್ಭುತವಾಗಿ ಕಾಣುತ್ತದೆ ಮತ್ತು ಒಂದು ಶಾಲು ಖರೀದಿಸಿದ್ದೇನೆ. ಈ ಉತ್ಪನ್ನವನ್ನು ಟ್ರೈಬ್ಸ್ ಇಂಡಿಯಾ ಮಾರಾಟ ಮಾಡಿದೆ ಎಂದು ಹೇಳಿದ್ದಾರೆ. ಜೊತೆಗೆ ಕರಕುಶಲ ಗೋಂಡ್ ಪೇಪರ್ ಪೇಂಟಿಂಗ್ ಖರೀದಿಸಿದ ಮೋದಿ, ಬುಡಕಟ್ಟು ಸಮುದಾಯಗಳ ಕಲೆ ಅದ್ಭುತವಾಗಿದೆ. ಇದು ಬಣ್ಣಗಳು ಮತ್ತು ಸೃಜನಶೀಲತೆಯ ಸಮ್ಮಿಲನವಾಗಿದೆ ಎಂದಿದ್ದಾರೆ.
ಸಾಂಪ್ರದಾಯಿಕ ನಾಗಾ ಶಾಲು ಖರೀದಿಸಿದ ಮೋದಿ, ಧೈರ್ಯ, ಸಹಾನುಭೂತಿ ಮತ್ತು ಸೃಜನಶೀಲತೆಗೆ ಸಮಾನಾರ್ಥಕವಾದ ನಾಗಾ ಸಂಸ್ಕೃತಿಯ ಬಗ್ಗೆ ಭಾರತ ಹೆಮ್ಮೆಪಡುತ್ತದೆ ಎಂದು ಹೇಳಿದ್ದಾರೆ.
ಖಾದಿ ಮಹಾತ್ಮ ಗಾಂಧಿ ಮತ್ತು ಭಾರತದ ಶ್ರೀಮಂತ ಇತಿಹಾಸದೊಂದಿಗೆ ನಿಕಟ ಸಂಬಂಧ ಹೊಂದಿದೆ. ಖಾದಿ ಹತ್ತಿ ಮಧುಬನಿ ಪೇಂಟೆಡ್ ಸ್ಟೋಲ್ ಖರೀದಿಸಿದೆ. ಇದು ಉತ್ತಮ ಗುಣಮಟ್ಟದ ಉತ್ಪನ್ನವಾಗಿದೆ ಮತ್ತು ನಾಗರಿಕರ ಸೃಜನಶೀಲತೆಯೊಂದಿಗೆ ನಿಕಟ ಸಂಬಂಧ ಹೊಂದಿದೆ ಎಂದು ಪ್ರಧಾನಿ ತಿಳಿಸಿದ್ದಾರೆ.
ನಾನು ಖಂಡಿತವಾಗಿಯೂ ಪಶ್ಚಿಮ ಬಂಗಾಳದ, ಕೈಯಿಂದ ಮಾಡಿದ ಈ ಸೆಣಬಿನ ಫೈಲ್ ಫೋಲ್ಡರ್ ಅನ್ನು ಬಳಸುತ್ತೇನೆ. ಇದು ರಾಜ್ಯದ ಬುಡಕಟ್ಟು ಸಮುದಾಯಗಳಿಂದ ಮಾಡಲ್ಪಟ್ಟಿದೆ. ನೀವೆಲ್ಲರೂ ಪಶ್ಚಿಮ ಬಂಗಾಳದಿಂದ ಸೆಣಬಿನ ಉತ್ಪನ್ನವನ್ನು ಖರೀದಿಸಬೇಕು ಎಂದು ಪ್ರಧಾನಿ ಟ್ವೀಟ್ ಮಾಡಿದ್ದಾರೆ.
ನಾನು ಆಗಾಗ ಗಮುಸಾ ಧರಿಸುವುದನ್ನು ಜನರು ನೋಡಿದ್ದಾರೆ ಎಂದಿರುವ ಪ್ರಧಾನಿ, ಅದು ಅತ್ಯಂತ ಕಂಪರ್ಟ್ ಆಗಿದೆ ಎಂದು ಹೇಳಿದ್ದಾರೆ. ಜೊತೆಗೆ ಕಾಕತಿಪಪುಂಗ್ ಡೆವಲಪ್‌ಮೆಂಟ್ ಬ್ಲಾಕ್‌ನ ವಿವಿಧ ಸ್ವ-ಸಹಾಯ ಗುಂಪುಗಳು ತಯಾರಿಸಿದ ಗಮುಸಾವನ್ನು ಖರೀದಿಸಿದ್ದೇನೆ ಎಂದಿದ್ದಾರೆ.
ಕೇರಳ ಮೂಲದ ಮಹಿಳೆಯರು ತಯಾರಿಸಿದ ಕ್ಲಾಸಿಕ್ ಪಾಮ್ ಕ್ರಾಫ್ಟ್ ನಿಲವಿಲಕ್ಕು ಸ್ವೀಕರಿಸಲು ನಾನು ಕುತೂಹಲದಿಂದ ಕಾಯುತ್ತಿದ್ದೇನೆ. ನಮ್ಮ ನಾರಿ ಶಕ್ತಿ ಸ್ಥಳೀಯ ಕರಕುಶಲ ವಸ್ತುಗಳು ಮತ್ತು ಉತ್ಪನ್ನಗಳನ್ನು ಸಂರಕ್ಷಿಸಿ ಜನಪ್ರಿಯಗೊಳಿಸಿರುವುದು ಶ್ಲಾಘನೀಯ ಎಂದು ಮೋದಿ ಹೇಳಿದ್ದಾರೆ.