ನವದೆಹಲಿ:ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಮಂಗಳವಾರ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರನ್ನು ಭೇಟಿ ಮಾಡಿ ಉಕ್ರೇನ್ ಬಿಕ್ಕಟ್ಟು, ಭಾರತೀಯರ ಸ್ಥಳಾಂತರ ಸೇರಿದಂತೆ ವಿವಿಧ ವಿಷಯಗಳ ಬಗ್ಗೆ ಮಾಹಿತಿ ನೀಡಿದ್ದಾರೆ. ಯುದ್ಧ ಪೀಡಿತ ಉಕ್ರೇನ್‌ನಿಂದ ಭಾರತೀಯ ನಾಗರಿಕರು, ವಿದ್ಯಾರ್ಥಿಗಳನ್ನು ಸ್ಥಳಾಂತರಿಸಲು ಸರ್ಕಾರ 'ಆಪರೇಷನ್ ಗಂಗಾ'ಯೋಜನೆಯಡಿ ರಕ್ಷಣಾ ಕಾರ್ಯ ನಡೆಸಲಾಗುತ್ತಿರುವ ಬಗ್ಗೆ ಮಾಹಿತಿ ನೀಡಿದ್ದಾರೆ.
ಇದಲ್ಲದೇ, ಕೇಂದ್ರ ಸರ್ಕಾರ ಉಕ್ರೇನ್ನಲ್ಲಿನ ಭಾರತೀಯರನ್ನು ದೇಶಕ್ಕೆ ಕರೆತರುವ ಭಾಗವಾಗಿ 4 ಕೇಂದ್ರದ ಸಚಿವರನ್ನು ವಿವಿಧ ದೇಶಗಳಿಗೆ ಕಳುಹಿಸಲಾಗಿದೆ. ಅವರು ಅಲ್ಲಿದ್ದುಕೊಂಡು ಭಾರತೀಯರನ್ನು ತಾಯ್ನಾಡಿಗೆ ಕಳುಹಿಸುವ ವ್ಯವಸ್ಥೆ ಮಾಡಲಿದ್ದಾರೆ ಎಂದು ಮೋದಿ ಅವರು ರಾಷ್ಟ್ರಪತಿಗಳಿಗೆ ಮಾಹಿತಿ ನೀಡಿದ್ದಾರೆ.
ಏತನ್ಮಧ್ಯೆ, ಉಕ್ರೇನ್ ಬಿಕ್ಕಟ್ಟಿನಿಂದಾಗಿ ಅಲ್ಲಿ ಸಿಲುಕಿಕೊಂಡಿರುವ ಭಾರತೀಯರ ರಕ್ಷಣೆಗೆ ಪ್ರಧಾನಿ ಮೋದಿ ಅವರ ನೇತೃತ್ವದಲ್ಲಿ ಸೋಮವಾರ ಸಂಜೆ ಉನ್ನತಮಟ್ಟದ ಸಭೆ ನಡೆಸಿತು. ಇದು ಮೋದಿ ಅಧ್ಯಕ್ಷತೆಯಲ್ಲಿ ನಡೆದ ಮೂರನೇ ಸಭೆಯಾಗಿದೆ.
ಸಭೆಯಲ್ಲಿ ಉಕ್ರೇನ್ನಲ್ಲಿ ಸಿಲುಕಿರುವ ಭಾರತೀಯರನ್ನು ರಕ್ಷಿಸಲು ಕೇಂದ್ರ ಸರ್ಕಾರದ ನಾಲ್ವರು ಸಚಿವರಾದ ಹರ್ದೀಪ್ ಸಿಂಗ್ ಪುರಿ, ಜ್ಯೋತಿರಾದಿತ್ಯ ಸಿಂಧಿಯಾ, ಕಿರಣ್ ರಿಜಿಜು ಮತ್ತು ವಿಕೆ ಸಿಂಗ್ರನ್ನು ವಿಶೇಷ ರಾಯಭಾರಿಗಳನ್ನಾಗಿ ನೇಮಕ ಮಾಡಿದೆ. ಈ ಸಚಿವರು ಉಕ್ರೇನ್ನಲ್ಲಿನ ಭಾರತೀಯರನ್ನು ರಕ್ಷಿಸಲು, ಉಕ್ರೇನ್ ನೆರೆಯ ರಾಷ್ಟ್ರಗಳೊಂದಿಗೆ ಸಮನ್ವಯ ಸಾಧಿಸುವ ಜವಾಬ್ದಾರಿ ನೀಡಿದೆ.
ಓದಿ:ಒಂದೇ ಕೈಯಲ್ಲಿ ರಷ್ಯಾ ಯುದ್ಧ ಟ್ಯಾಂಕರ್ ನಿಲ್ಲಿಸಿದ ಬಲಶಾಲಿ..ಸಖತ್ ಸದ್ದು ಮಾಡುತ್ತಿದೆ ವೈರಲ್ ವಿಡಿಯೋ!