ನವದೆಹಲಿ :ಪ್ರಧಾನಿ ನರೇಂದ್ರ ಮೋದಿ ಅವರು ಇಂದು ರಾಷ್ಟ್ರ ರಾಜಧಾನಿಯಲ್ಲಿ 9 ನೇ ಜಿ20 ಸಂಸದೀಯ ಸ್ಪೀಕರ್‌ಗಳ ಶೃಂಗಸಭೆಯನ್ನು (ಪಿ20) ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, 'ಭಯೋತ್ಪಾದನೆ ಜಗತ್ತಿಗೆ ಸವಾಲಾಗಿದೆ. ಇಡೀ ಜಗತ್ತನ್ನು ಒಂದು ಕುಟುಂಬದಂತೆ ನೋಡಬೇಕು. ಸಂಘರ್ಷ ಮತ್ತು ಘರ್ಷಣೆಗಳಿಂದ ತುಂಬಿರುವ ಪ್ರಪಂಚವು, ಯಾರಿಗೂ ಪ್ರಯೋಜನವನ್ನುಂಟು ಮಾಡುವುದಿಲ್ಲ. ವಿಭಜಿತ ಜಗತ್ತು ನಾವು ಎದುರಿಸುತ್ತಿರುವ ಸವಾಲುಗಳಿಗೆ ಪರಿಹಾರ ನೀಡಲು ಸಾಧ್ಯವಿಲ್ಲ. ಇದು ಶಾಂತಿ ಮತ್ತು ಸಹೋದರತ್ವದ ಸಮಯ, ನಾವೆಲ್ಲರೂ ಒಟ್ಟಾಗಿ ಮುನ್ನಡೆಯುವ ಸಮಯ. ಇದು ಪ್ರತಿಯೊಬ್ಬರ ಅಭಿವೃದ್ಧಿ ಮತ್ತು ಕಲ್ಯಾಣದ ಸಮಯ" ಎಂದರು.
'ಭಾರತ ದೇಶವು ಚಂದ್ರನ ಮೇಲೆ ಯಶಸ್ವಿಯಾಗಿ ಇಳಿದಿದೆ. ಜೊತೆಗೆ, ಜಿ20 ಶೃಂಗಸಭೆಯನ್ನು ಯಶಸ್ವಿಯಾಗಿ ಆಯೋಜಿಸಿದೆ. ಇಂದು ನಾವು P20 ಶೃಂಗಸಭೆಯನ್ನು ಆಯೋಜಿಸಿದ್ದೇವೆ. ಭಾರತವು ಪ್ರಜಾಪ್ರಭುತ್ವದ ತಾಯಿ ಮತ್ತು ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವವೂ ಆಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಕುರಿತು ಮಾಹಿತಿ ನೀಡಿದ ಪ್ರಧಾನಮಂತ್ರಿ ಕಾರ್ಯಾಲಯ, ಭಾರತದ G20 ಪ್ರೆಸಿಡೆನ್ಸಿಯ ವಿಶಾಲ ಚೌಕಟ್ಟಿನ ಅಡಿಯಲ್ಲಿ ಭಾರತದ ಸಂಸತ್ತು ಶೃಂಗಸಭೆಯನ್ನು ಆಯೋಜಿಸಿದೆ. 9ನೇ P20 ಶೃಂಗಸಭೆಯ ಥೀಮ್ ಎಂದು ಅದು, 'ಒಂದು ಭೂಮಿ, ಒಂದು ಕುಟುಂಬ, ಒಂದು ಭವಿಷ್ಯಕ್ಕಾಗಿ ಸಂಸತ್ತು' ಎಂಬುದಾಗಿದೆ. ಎರಡು ದಿನಗಳ ಜಾಗತಿಕ ಕಾರ್ಯಕ್ರಮದಲ್ಲಿ ಜಿ20 ಸದಸ್ಯರು ಮತ್ತು ಆಹ್ವಾನಿತ ರಾಷ್ಟ್ರಗಳ ಸಂಸತ್ತಿನ ಅಧ್ಯಕ್ಷರು ಭಾಗವಹಿಸಿದ್ದಾರೆ. ಹಾಗೂ ಪ್ಯಾನ್ ಆಫ್ರಿಕನ್ ಸಂಸತ್ತಿನ ಅಧ್ಯಕ್ಷರು ಭಾರತದಲ್ಲಿ ಮೊದಲ ಬಾರಿಗೆ ಪಿ20 ಶೃಂಗಸಭೆಯಲ್ಲಿ ಭಾಗವಹಿಸಿದ್ದಾರೆ ಎಂದು ತಿಳಿಸಿದೆ.
ಇದನ್ನೂ ಓದಿ :ಪ್ಯಾಲೆಸ್ಟೀನ್ ಉಗ್ರಗಾಮಿ ಸಂಘಟನೆ ದಾಳಿ : ಇಸ್ರೇಲ್ ಜೊತೆಗೆ ಒಗ್ಗಟ್ಟಿನಿಂದ ನಿಲ್ಲುತ್ತೇವೆ ಎಂದ ಪ್ರಧಾನಿ ಮೋದಿ