ಮ್ಯೂನಿಚ್: ರವಿವಾರ ನಡೆದ ಜಿ7 ಸಭೆಯ ಹಿನ್ನೆಲೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅರ್ಜೆಂಟಿನಾದ ಅಧ್ಯಕ್ಷ ಆಲ್ಬರ್ಟೊ ಫರ್ನಾಂಡೀಸ್ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಿದರು. ವ್ಯಾಪಾರ-ವಾಣಿಜ್ಯ, ಬಂಡವಾಳ ಹೂಡಿಕೆ, ರಕ್ಷಣಾ ಸಹಯೋಗ, ಹವಾಮಾನ ಮತ್ತು ಆಹಾರ ಸುರಕ್ಷತೆ ಸೇರಿದಂತೆ ಹಲವು ವಿಷಯಗಳ ಕುರಿತು ಈ ಸಂದರ್ಭದಲ್ಲಿ ಇಬ್ಬರು ನಾಯಕರು ಚರ್ಚಿಸಿದ್ದಾರೆ.
ಭಾರತ-ಅರ್ಜೆಂಟಿನಾ ಮಾತುಕತೆ; ದ್ವಿಪಕ್ಷೀಯ ವ್ಯಾಪಾರ ವೃದ್ಧಿಗೆ ಆದ್ಯತೆ
"ಭಾರತ ಮತ್ತು ಅರ್ಜೆಂಟಿನಾಗಳ ಮಧ್ಯದ ಸಂಬಂಧವನ್ನು ಇನ್ನಷ್ಟು ಬಲಗೊಳಿಸುವ ನಿಟ್ಟಿನಲ್ಲಿ ಅಧ್ಯಕ್ಷ ಆಲ್ಬರ್ಟೊ ಫರ್ನಾಂಡೀಸ್ ಅವರೊಂದಿಗೆ ಫಲಪ್ರದವಾದ ಚರ್ಚೆ ನಡೆಯಿತು" ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ.
"ಭಾರತ ಮತ್ತು ಅರ್ಜೆಂಟಿನಾಗಳ ಮಧ್ಯದ ಸಂಬಂಧವನ್ನು ಇನ್ನಷ್ಟು ಬಲಗೊಳಿಸುವ ನಿಟ್ಟಿನಲ್ಲಿ ಅಧ್ಯಕ್ಷ ಆಲ್ಬರ್ಟೊ ಫರ್ನಾಂಡೀಸ್ ಅವರೊಂದಿಗೆ ಫಲಪ್ರದ ಚರ್ಚೆ ನಡೆಯಿತು. ಎರಡೂ ದೇಶಗಳ ನಡುವಿನ ಬಲಿಷ್ಠ ಸಂಬಂಧದಿಂದ ನಮ್ಮ ಜನರಿಗೆ ಸಾಕಷ್ಟು ಅನುಕೂಲಗಳಾಗುತ್ತವೆ." ಎಂದು ಮೋದಿ ತಿಳಿಸಿದ್ದಾರೆ.
2019ರಲ್ಲಿ ಉಭಯ ದೇಶಗಳ ಸಂಬಂಧವನ್ನು ಕಾರ್ಯತಂತ್ರದ ಪಾಲುದಾರರ ಮಟ್ಟಕ್ಕೆ ಏರಿಸಲಾಗಿತ್ತು. ವಿಭಿನ್ನ ಆಯಾಮದ ಸಂಬಂಧಗಳು ಎರಡೂ ದೇಶಗಳ ನಡುವೆ ಬೆಸೆಯುತ್ತಿವೆ. ಇತಿಹಾಸವನ್ನು ನೋಡುವುದಾದರೆ, ಭಾರತವು 1943ರಲ್ಲಿ ಅರ್ಜೆಂಟಿನಾ ರಾಜಧಾನಿ ಬ್ಯೂನಸ್ ಐರಿಸ್ನಲ್ಲಿ ಟ್ರೇಡ್ ಕಮಿಷನ್ ಕಚೇರಿ ಆರಂಭಿಸಿತ್ತು. ನಂತರ 1949ರಲ್ಲಿ ದಕ್ಷಿಣ ಅಮೆರಿಕದಲ್ಲಿ ಭಾರತದ ಪ್ರಥಮ ರಾಜತಾಂತ್ರಿಕ ಕಚೇರಿಯನ್ನಾಗಿ ಇದನ್ನು ಪರಿವರ್ತಿಸಲಾಗಿದೆ.