ಅಹಮದಾಬಾದ್:ವಿಶ್ವ ಪ್ರಸಿದ್ಧ ಸೋಮನಾಥ ದೇವಾಲಯ ಟ್ರಸ್ಟ್ನ ಅಧ್ಯಕ್ಷರಾಗಿ ಪ್ರಧಾನಿ ನರೇಂದ್ರ ಮೋದಿ ಆಯ್ಕೆಯಾಗಿದ್ದು, ಈ ಹುದ್ದೆ ಅಲಂಕರಿಸಿದ ದೇಶದ ಎರಡನೇ ಪ್ರಧಾನಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಈ ಹಿಂದೆ ಮಾಜಿ ಪ್ರಧಾನಿ ಮೊರಾರ್ಜಿ ದೇಸಾಯಿ ಈ ದೇವಾಲಯದ ಟ್ರಸ್ಟ್ನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಇದಾದ ಬಳಿಕ ಇದೀಗ ಮೋದಿ ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ. ಕಳೆದ ವರ್ಷ ಅಕ್ಟೋಬರ್ನಲ್ಲಿ ಗುಜರಾತ್ನ ಮಾಜಿ ಮುಖ್ಯಮಂತ್ರಿ ಕೇಶುಭಾಯ್ ಪಟೇಲ್ ಅವರ ನಿಧನದ ನಂತರ ಸೋಮನಾಥ ಟ್ರಸ್ಟ್ನ ಅಧ್ಯಕ್ಷ ಹುದ್ದೆ ಖಾಲಿಯಾಗಿತ್ತು. ಪಟೇಲ್ 16 ವರ್ಷಗಳ ಕಾಲ(2004-2020) ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.
ಓದಿ: ಅಯೋಧ್ಯೆ ರಾಮಮಂದಿರ ನಿರ್ಮಾಣಕ್ಕಾಗಿ 1.11 ಲಕ್ಷ ರೂ. ದೇಣಿಗೆ ನೀಡಿದ ದಿಗ್ವಿಜಯ್ ಸಿಂಗ್!
ಇದಕ್ಕೆ ಸಂಬಂಧಿಸಿದಂತೆ ಟ್ವೀಟ್ ಮಾಡಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ,ಪಿಎಂ ಮೋದಿ ನೇತೃತ್ವದ ಈ ಟ್ರಸ್ಟ್ ಸೋಮನಾಥ ದೇವಾಲಯದ ಘನತೆ ಮತ್ತು ಭವ್ಯತೆಯನ್ನು ಇನ್ನಷ್ಟು ಹೆಚ್ಚಿಸುತ್ತದೆ ಎಂದಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಸೋಮನಾಥ ದೇವಾಲಯದ ಟ್ರಸ್ಟ್ನ ಟ್ರಸ್ಟಿಗಳಲ್ಲಿ ಒಬ್ಬರಾಗಿದ್ದು, ಸೋಮವಾರ ನಡೆದ ಸಭೆಯಲ್ಲಿ ಅಧ್ಯಕ್ಷರಾಗಿ ನೇಮಕ ಮಾಡಲಾಗಿದೆ ಎಂದು ಕಾರ್ಯದರ್ಶಿ ಪಿ.ಕೆ ಲಾಹೇರಿ ಹೇಳಿದ್ದಾರೆ.
ದೇವಾಲಯದ ಟ್ರಸ್ಟಿಗಳಲ್ಲಿ ಬಿಜೆಪಿ ಹಿರಿಯ ಮುಖಂಡ ಎಲ್.ಕೆ ಅಡ್ವಾಣಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಗುಜರಾತ್ ಮೂಲದ ವಿದ್ವಾಂಸ ಜೆ.ಡಿ ಪರ್ಮರ್ ಮತ್ತು ಉದ್ಯಮಿ ಹರ್ಷವರ್ಧನ್ ನಿಯೋಟಿಯಾ ಸೇರಿದ್ದಾರೆ. ದಾಖಲೆ ಪ್ರಕಾರ ಮಾಜಿ ಪ್ರಧಾನಿ ದೇಸಾಯಿ 1967 ಮತ್ತು 1995ರ ನಡುವೆ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.