ನವದೆಹಲಿ:ಕ್ವಾಡ್(QUAD) ಶೃಂಗಸಭೆ ಹಾಗೂ ಸೆಪ್ಟೆಂಬರ್ 25ರಂದು ನಡೆಯಲಿರುವ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಭಾಗಿಯಾಗುವ ಉದ್ದೇಶದಿಂದ ಪ್ರಧಾನಿ ನರೇಂದ್ರ ಮೋದಿ ಅಮೆರಿಕ ಪ್ರವಾಸ ಕೈಗೊಳ್ಳುತ್ತಿದ್ದು, ನಾಳೆ ಬೆಳಗ್ಗೆ ನವದೆಹಲಿಯಿಂದ ವಿಮಾನ ಏರಲಿದ್ದಾರೆ.
ಅಮೆರಿಕ ಪ್ರವಾಸದ ಸಂದರ್ಭದಲ್ಲಿ ಜೋ ಬೈಡನ್ ಹಾಗೂ ಕಮಲಾ ಹ್ಯಾರಿಸ್ ಜೊತೆ ಮಹತ್ವದ ಮಾತುಕತೆಯಲ್ಲಿ ನಮೋ ಭಾಗಿಯಾಗಲಿದ್ದಾರೆ ಎಂದು ವಿದೇಶಾಂಗ ಕಾರ್ಯದರ್ಶಿ ಹರ್ಷ ವಿ.ಶೃಂಗ್ಲಾ ಮಾಹಿತಿ ಹಂಚಿಕೊಂಡಿದ್ದಾರೆ. ಉಭಯ ನಾಯಕರ ಭೇಟಿಗಾಗಿ ಈಗಾಗಲೇ ದಿನಾಂಕ ಸಹ ನಿಗದಿಯಾಗಿದ್ದು, ಸೆ. 23ರಂದು ಕಮಲಾ ಹ್ಯಾರಿಸ್ ಹಾಗೂ ಸೆ. 24ರಂದು ಜೋ ಬೈಡನ್ ಅವರೊಂದಿಗೆ ಸಮಾಲೋಚನೆ ನಡೆಸಲಿದ್ದಾರೆ.
ಇದನ್ನೂ ಓದಿ:ರೈಲ್ವೆ ಪ್ಲಾಟ್ ಫಾರ್ಮ್ನಲ್ಲೇ ಮಗು ಕೊಲೆಗೈದ ಪಾಪಿ ತಂದೆ.. CCTVಯಲ್ಲಿ ಕೃತ್ಯ ಸೆರೆ
ಸುದ್ದಿಗೋಷ್ಠಿಯಲ್ಲಿ ಭಾಗಿಯಾಗಿ ಮಾತನಾಡಿದ ಅವರು, ಕೊರೊನಾ ಮಹಾಮಾರಿ ಬಳಿಕ ಪ್ರಧಾನಿ ನರೇಂದ್ರ ಮೋದಿ ಕೈಗೊಳ್ಳುತ್ತಿರುವ ಮೊದಲ ವಿದೇಶಿ ಪ್ರವಾಸ ಇದಾಗಿದ್ದು, ಕ್ವಾಡ್ ಶೃಂಗಸಭೆ ಹಾಗೂ ವಿಶ್ವಸಂಸ್ಥೆ ಸಾಮಾನ್ಯ ಸಭೆಯಲ್ಲಿ ಭಾಗಿಯಾಗುವುದು ಪ್ರವಾಸದ ಮುಖ್ಯ ಉದ್ದೇಶವಾಗಿದೆ. ಇದರ ಜೊತೆಗೆ ಉಭಯ ದೇಶಗಳ ನಡುವಿನ ಸಂಬಂಧ ಮತ್ತಷ್ಟು ಗಟ್ಟಿಗೊಳಿಸುವ ಉದ್ದೇಶದಿಂದ ಪ್ರವಾಸ ಮಹತ್ವ ಪಡೆದುಕೊಂಡಿದೆ.
ಸೆಪ್ಟೆಂಬರ್ 24ರಂದು ಶ್ವೇತ ಭವನದಲ್ಲಿ ನಡೆಯಲಿರುವ ಕ್ವಾಡ್ ಶೃಂಗಸಭೆಯಲ್ಲಿ ನಮೋ ಭಾಗಿಯಾಗಲಿದ್ದು, ಈ ವೇಳೆ ಉಪಾಧ್ಯಕ್ಷ ಕಮಲಾ ಹ್ಯಾರಿಸ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಲಿದ್ದಾರೆ.
ಕ್ವಾಡ್ ಶೃಂಗಸಭೆಯಲ್ಲಿ ಅಫ್ಘಾನಿಸ್ತಾನ ಉಂಟಾಗಿರುವ ಬಿಕ್ಕಟ್ಟು, ಕೋವಿಡ್ ಸಮಸ್ಯೆ, ಇಂಡೋ-ಪೆಸಿಫಿಕ್ ಸಮಸ್ಯೆ ಸೇರಿದಂತೆ ಅನೇಕ ಜಾಗತಿಕ ಸವಾಲುಗಳ ಬಗ್ಗೆ ಚರ್ಚೆ ನಡೆಯುವ ಸಾಧ್ಯತೆ ಇದೆ. ಇದರ ಜೊತೆಗೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಭಾರತದ ಖಾಯಂ ಸದಸ್ಯತ್ವ, ಪ್ರಸ್ತುತ ಪರಿಸ್ಥಿತಿಗೆ ಅನುಗುಣವಾಗಿ ವಿಶ್ವಸಂಸ್ಥೆಯಲ್ಲಿನ ಸುಧಾರಣೆಗಳ ಬಗ್ಗೆಯೂ ಪ್ರಧಾನಿ ಮೋದಿ ಪ್ರಸ್ತಾಪ ಮಾಡುವ ಸಾಧ್ಯತೆ ಇದೆ. ಶೃಂಗಸಭೆಯಲ್ಲಿ ಆಸ್ಟ್ರೇಲಿಯಾ, ಜಪಾನ್ ಪ್ರಧಾನಿಗಳು ಭಾಗಿಯಾಗಲಿದ್ದು, ಸೆಪ್ಟೆಂಬರ್ 25ರಂದು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಭಾಗಿಯಾಗಲು ಮೋದಿ ನ್ಯೂಯಾರ್ಕ್ಗೆ ತೆರಳಲಿದ್ದಾರೆ.