ಗುರುಗ್ರಾಮ್:ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಮುಲಾಯಂ ಸಿಂಗ್ ಯಾದವ್ ನಿಧನರಾಗಿದ್ದಾರೆ. ಮುಲಾಯಂ ಸಿಂಗ್ ಯಾದವ್ ಅವರು ಗುರುಗ್ರಾಮ್‌ನ ಮೇದಾಂತ ಆಸ್ಪತ್ರೆಯಲ್ಲಿ ಸೋಮವಾರ ಬೆಳಗ್ಗೆ 8:16 ಕ್ಕೆ ಕೊನೆಯುಸಿರೆಳೆದರು.
ಮುಲಾಯಂ ಸಿಂಗ್ ಯಾದವ್ ಅವರನ್ನು ಆಗಸ್ಟ್ 22 ರಂದು ಮೇದಾಂತ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಕ್ಟೋಬರ್ 1 ರ ರಾತ್ರಿ ಅವರನ್ನು ಐಸಿಯುಗೆ ಸ್ಥಳಾಂತರಿಸಲಾಯಿತು. ಮೇದಾಂತ ಆಸ್ಪತ್ರೆಯ ವೈದ್ಯರ ಸಮಿತಿ ಮುಲಾಯಂ ಸಿಂಗ್ ಯಾದವ್ ಅವರಿಗೆ ಚಿಕಿತ್ಸೆ ನೀಡಲಾಗುತ್ತಿತ್ತು.
ಮುಲಾಯಂ ಸಿಂಗ್ ನಿಧನದ ಸುದ್ದಿ ತಿಳಿಯುತ್ತಿದ್ದಂತೆ, ರಾಷ್ಟ್ರಪತಿ ದ್ರೌಪತಿ ಮುರ್ಮು, ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಸೇರಿದಂತೆ ಅನೇಕರು ಸಂತಾಪ ಸೂಚಿಸಿದ್ದಾರೆ. ಅಮಿತ್ ಶಾ ಅವರು ಮೇದಾಂತ ಆಸ್ಪತ್ರೆಗೆ ಭೇಟಿ ನೀಡಿದ್ದಾರೆ. ಮುಲಾಯಂ ಸಿಂಗ್ ಯಾದವ್ ಪುತ್ರ ಅಖಿಲೇಶ್ ಯಾದವ್ ಸಹ ಗುರುಗ್ರಾಮದ ಮೇದಾಂತ ಆಸ್ಪತ್ರೆ ತಲುಪಿ ತಂದೆಯನ್ನು ನೋಡಿ ದುಃಖತಪ್ತರಾದರು.
ರಾಮ್ ಗೋಪಾಲ್ ಯಾದವ್, ಪ್ರತೀಕ್ ಯಾದವ್ ಮತ್ತು ಧರ್ಮೇಂದ್ರ ಯಾದವ್ ಸೇರಿದಂತೆ ಅನೇಕ ಕುಟುಂಬ ಸದಸ್ಯರು ಆಸ್ಪತ್ರೆಯಲ್ಲಿ ಹಾಜರಿದ್ದರು. ಮುಲಾಯಂ ಸಿಂಗ್ ಯಾದವ್ ನಿಧನದ ಸುದ್ದಿ ತಿಳಿದ ಸಮಾಜವಾದಿ ಪಕ್ಷದ ಕಾರ್ಯಕರ್ತರು ಮೇದಾಂತ ಆಸ್ಪತ್ರೆ ತಲುಪಲು ಆರಂಭಿಸಿದ್ದಾರೆ. ಆಸ್ಪತ್ರೆಯ ಹೊರಗೆ ಕಾರ್ಯಕರ್ತರು ಜಮಾಯಿಸುತ್ತಿದ್ದಾರೆ.
ಮುಲಾಯಂ ಸಿಂಗ್ ಯಾದವ್ ಅವರು ಉತ್ತರಪ್ರದೇಶ ಮತ್ತು ರಾಷ್ಟ್ರೀಯ ರಾಜಕೀಯದಲ್ಲಿ ತಮ್ಮನ್ನು ತಾವು ಗುರುತಿಸಿಕೊಂಡಿದ್ದರು. ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಅವರು ಪ್ರಜಾಪ್ರಭುತ್ವದ ಪ್ರಮುಖ ಸೈನಿಕರಾಗಿದ್ದರು. ರಕ್ಷಣಾ ಸಚಿವರಾಗಿ ಅವರು ಬಲಿಷ್ಠ ಭಾರತಕ್ಕಾಗಿ ಕೆಲಸ ಮಾಡಿದರು. ಅವರ ಸಂಸದೀಯ ಮಧ್ಯಸ್ಥಿಕೆಗಳು ಒಳನೋಟವುಳ್ಳ ಮತ್ತು ರಾಷ್ಟ್ರೀಯ ಹಿತಾಸಕ್ತಿಗಳನ್ನು ಹೆಚ್ಚಿಸಲು ಒತ್ತು ನೀಡಿವೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಟ್ವೀಟ್ ಮಾಡಿದ್ದಾರೆ.
ನಾನು ಮುಖ್ಯಮಂತ್ರಿಗಳಾಗಿ ಸೇವೆ ಸಲ್ಲಿಸುತ್ತಿದ್ದಾಗ ಮುಲಾಯಂ ಸಿಂಗ್ ಯಾದವ್ ಅವರೊಂದಿಗೆ ಅನೇಕ ಸಂವಾದಗಳನ್ನು ನಡೆಸಿದ್ದೇನೆ. ನಮ್ಮಿಬ್ಬರ ಮಧ್ಯೆ ನಿಕಟ ಒಡನಾಟವು ಮುಂದುವರೆಯಿತು ಮತ್ತು ಅವರ ಅಭಿಪ್ರಾಯಗಳನ್ನು ಕೇಳಲು ನಾನು ಯಾವಾಗಲೂ ಎದುರು ನೋಡುತ್ತಿದ್ದೆ. ಅವರ ನಿಧನ ನನಗೆ ನೋವುಂಟುಮಾಡುತ್ತದೆ. ಅವರ ಕುಟುಂಬ ಮತ್ತು ಲಕ್ಷಾಂತರ ಬೆಂಬಲಿಗರಿಗೆ ಆ ಭಗವಂತ ಧೈರ್ಯ ತುಂಬಲಿ. ಓಂ ಶಾಂತಿ ಎಂದು ಪ್ರಧಾನಿ ನರೇಂದ್ರ ಮೋದಿ ಮತ್ತೊಂದು ಟ್ವೀಟ್‌ನಲ್ಲಿ ತಿಳಿಸಿದ್ದಾರೆ.
ಮುಲಾಯಂ ಸಿಂಗ್ ಯಾದವ್ ನಿಧನಕ್ಕೆ ರಾಷ್ಟ್ರಪತಿ ಮುರ್ಮು ಸಂತಾಪ ವ್ಯಕ್ತಪಡಿಸಿದ್ದು, ದೇಶಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಹೇಳಿದ್ದಾರೆ. ಮುಲಾಯಂ ಸಿಂಗ್ ಅವರ ನಿಧನಕ್ಕೆ ಸಂತಾಪ ಸೂಚಿಸಿದ ಸಿಎಂ ಆದಿತ್ಯನಾಥ್, ಮೂರು ದಿನಗಳ ಶೋಕಾಚರಣೆಯನ್ನು ಘೋಷಿಸಿದ್ದಾರೆ. ಮುಲಾಯಂ ಸಿಂಗ್ ಯಾದವ್ ಅವರ ನಿಧನಕ್ಕೆ ದೇಶಾದ್ಯಂತ ನಾಯಕರು ಶ್ರದ್ಧಾಂಜಲಿ ಸಲ್ಲಿಸುತ್ತಿದ್ದಾರೆ. 'ನನ್ನ ಗೌರವಾನ್ವಿತ ತಂದೆ ಮುಲಾಯಂಜಿ ಜೀ ಮತ್ತು ಎಲ್ಲರ ನಾಯಕ ಅಗಲಿದ್ದಾರೆ ಎಂದು ಅಖಿಲೇಶ್ ಯಾದವ್ ಟ್ವೀಟ್ ಮಾಡಿದ್ದಾರೆ. ಮುಲಾಯಂ ಸಿಂಗ್ ಯಾದವ್ ಅವರಿಗೆ 82 ವರ್ಷ ವಯಸ್ಸಾಗಿತ್ತು ಮತ್ತು ದೀರ್ಘಕಾಲದಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಎದೆಯ ಸೋಂಕು, ಮೂತ್ರದ ಸೋಂಕು ಮತ್ತು ಉಸಿರಾಟದ ತೊಂದರೆಯಿಂದಾಗಿ ಮುಲಾಯಂ ಸಿಂಗ್ ಯಾದವ್ ಅವರನ್ನು ಗುರುಗ್ರಾಮ್‌ನ ಮೇದಾಂತ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಓದಿ:ಜೀವನದ ಅಂತಿಮ ಕುಸ್ತಿಯಲ್ಲಿ ಸೋತ ನೇತಾಜಿ.. ಮುಲಾಯಂ ಸಿಂಗ್ ಇನ್ನಿಲ್ಲ...