ಚಮೋಲಿ :ಉತ್ತರಾಖಂಡದ ಚಮೋಲಿ ಜಿಲ್ಲೆಯ ಜೋಶಿಮಠದ ರಾಣಿ ಗ್ರಾಮದಲ್ಲಿ ಹಿಮನದಿ ಒಡೆದು ಉಂಟಾಗಿರುವ ಪ್ರವಾಹದಲ್ಲಿ 100 ರಿಂದ 150 ಮಂದಿ ಸಾವನ್ನಪ್ಪಿರುವ ಶಂಕೆಯಿದ್ದು, ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಗಣ್ಯರು ರಾಜ್ಯದ ಜನರ ನೆರವಿಗೆ ನಿಂತಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಪಿಎಂ ಮೋದಿ, ಉತ್ತರಾಖಂಡದ ಪರಿಸ್ಥಿತಿಯನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡುತ್ತಿದ್ದೇನೆ. ಭಾರತವು ಉತ್ತರಾಖಂಡದೊಂದಿಗೆ ನಿಂತಿದೆ ಮತ್ತು ಅಲ್ಲಿ ಪ್ರತಿಯೊಬ್ಬರ ಸುರಕ್ಷತೆಗಾಗಿ ರಾಷ್ಟ್ರವೇ ಪ್ರಾರ್ಥಿಸುತ್ತದೆ. ಹಿರಿಯ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿದ್ದು, ಎನ್‌ಡಿಆರ್‌ಎಫ್ ಸೇರಿದಂತೆ ರಕ್ಷಣಾ ಪಡೆಗಳ ಕಾರ್ಯಾಚರಣೆ ಕುರಿತು ಮಾಹಿತಿ ಪಡೆಯಲಾಗುತ್ತಿದೆ ಎಂದು ಹೇಳಿದ್ದಾರೆ.
3 ಎನ್‌ಡಿಆರ್‌ಎಫ್ ತಂಡಗಳು ಜೋಶಿಮಠವನ್ನು ತಲುಪಿವೆ. ದೆಹಲಿಯಿಂದ ಉತ್ತರಾಖಂಡಕ್ಕೆ ವಿಮಾನಗಳ ಮೂಲಕ ತೆರಳಲು ಹೆಚ್ಚಿನ ತಂಡಗಳು ಸಿದ್ದವಾಗಿವೆ. ಈ ಕಷ್ಟದ ಸಮಯದಲ್ಲಿ ಮೋದಿ ಸರ್ಕಾರ ನಿಮ್ಮೊಂದಿಗೆ ನಿಲ್ಲುತ್ತದೆ ಎಂದು ಉತ್ತರಾಖಂಡದ ಜನರಿಗೆ ಭರವಸೆ ನೀಡುತ್ತೇನೆ. ಅಗತ್ಯ ಸಹಾಯ ನೀಡಲಾಗುವುದು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ತಿಳಿಸಿದ್ದಾರೆ.