ನವದೆಹಲಿ: ಪ್ರತಿ ವರ್ಷ ಜನವರಿ 15ರಂದು ಭಾರತದಲ್ಲಿ ಸೇನಾ ದಿನವನ್ನು ಆಚರಿಸಲಾಗುತ್ತಿದೆ. ಯೋಧರಿಗೆ ಗೌರವ ಸಮರ್ಪಿಸುವ ಸಲುವಾಗಿ ಸೇನಾ ದಿನ ಆಚರಿಸಲಾಗುತ್ತಿದ್ದು, ಸೇನಾ ಸಿಬ್ಬಂದಿ ಮತ್ತು ಯೋಧರಿಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಹಾಗೂ ಪ್ರಧಾನಿ ನರೇಂದ್ರ ಮೋದಿ ಶುಭ ಕೋರಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ರಾಮನಾಥ್ ಕೋವಿಂದ್, 'ರಾಷ್ಟ್ರೀಯ ಭದ್ರತೆ ಒದಗಿಸುವಲ್ಲಿ ಭಾರತೀಯ ಸೇನೆ ಪ್ರಮುಖ ಪಾತ್ರ ವಹಿಸಿದೆ. ಗಡಿ ರಕ್ಷಣೆ ಮತ್ತು ಶಾಂತಿ ಕಾಪಾಡುವಲ್ಲಿ ನಮ್ಮ ಸೈನಿಕರು ವೃತ್ತಿಪರತೆ, ತ್ಯಾಗ ಮತ್ತು ಶೌರ್ಯವನ್ನು ಪ್ರದರ್ಶಿಸಿದ್ದಾರೆ. ನಿಮ್ಮ ಸೇವೆಗೆ ರಾಷ್ಟ್ರವು ಆಭಾರಿಯಾಗಿದೆ. ಯೋಧರಿಗೆ ಸೇನಾ ದಿನದ ಶುಭಾಶಯಗಳು' ಎಂದು ತಿಳಿಸಿದ್ದಾರೆ.
'ಸೇನಾ ದಿನದ ಶುಭ ಸಂದರ್ಭದಲ್ಲಿ ನಮ್ಮ ಧೈರ್ಯಶಾಲಿ ಹಾಗೂ ಗೌರವಾನ್ವಿತ ಯೋಧರಿಗೆ ಮತ್ತು ಅವರ ಕುಟುಂಬಗಳಿಗೆ ಶುಭಾಶಯ ತಿಳಿಸುತ್ತೇನೆ. ಭಾರತೀಯ ಸೇನೆಯು ಶೌರ್ಯ ಮತ್ತು ವೃತ್ತಿಪರತೆಗೆ ಹೆಸರುವಾಸಿಯಾಗಿದೆ. ರಾಷ್ಟ್ರೀಯತೆಗೆ ಭಾರತೀಯ ಸೇನೆ ಅಮೂಲ್ಯವಾದ ಕೊಡುಗೆ ನೀಡಿದ್ದು, ಅದನ್ನು ಪದಗಳಲ್ಲಿ ಬಣ್ಣಿಸಲು ಸಾಧ್ಯವಿಲ್ಲ' ಎಂದು ಪ್ರಧಾನಿ ಟ್ವೀಟ್ ಮಾಡಿದ್ದಾರೆ.
'ಭಾರತೀಯ ಸೇನಾ ಸಿಬ್ಬಂದಿ ಪ್ರತಿಕೂಲ ಭೂ ಪ್ರದೇಶಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ನೈಸರ್ಗಿಕ ವಿಪತ್ತುಗಳು ಸೇರಿದಂತೆ ಮಾನವೀಯ ಬಿಕ್ಕಟ್ಟಿನ ಸಂದರ್ಭದಲ್ಲಿ ಸಹ ನಾಗರಿಕರಿಗೆ ಸಹಾಯ ಮಾಡುವಲ್ಲಿ ಮುಂಚೂಣಿಯಲ್ಲಿದ್ದಾರೆ. ಸಾಗರೋತ್ತರ ಶಾಂತಿಪಾಲನಾ ಕಾರ್ಯಾಚರಣೆಗಳಲ್ಲಿ ಸೇನೆಯ ಕೊಡುಗೆ ಅಪಾರ' ಎಂದು ಹೇಳಿದ್ದಾರೆ.